ನವದೆಹಲಿ: ಗಡಿಯಲ್ಲಿ ಭಾರತೀಯ ಯೋಧನನ್ನು ಪಾಕಿಸ್ತಾನ ಸೇನೆ ಕೊಲೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ನೇಹ ಹಾಗೂ ಶಾಂತಿ ಮಾತುಕತೆಯ ಪತ್ರ ಬರೆದಿದ್ದಾರೆ. ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ಭಾರತ ಸರ್ಕಾರ ಕೂಡ ಮಾತುಕತೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದು, ನ್ಯೂಯಾರ್ಕ್
ನಲ್ಲಿ ನಡೆಯುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರು ರ್ಚಚಿಸಲಿದ್ದಾರೆ. ಆದರೆ ಇದು ಶಾಂತಿ ಸ್ಥಾಪನೆ ಮಾತುಕತೆಗೆ ಪೀಠಿಕೆಯಲ್ಲ ಎಂದು ಭಾರತ ಸ್ಪಷ್ಪಪಡಿಸಿದೆ.
ಉಗ್ರರ ನುಸುಳುವಿಕೆ, ಗಡಿಯಲ್ಲಿ ಅಪ್ರಚೋದಿತ ದಾಳಿ, ಭಯೋತ್ಪಾದಕ ಚಟುವಟಿಕೆಗಳ ಕಾರಣ ಪಾಕಿಸ್ತಾನದ ಜತೆಗಿನ ಮಾತುಕತೆ ಮುಗಿದ ಅಧ್ಯಾಯ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಪಾಕಿಸ್ತಾನದ ಹಾಲಿ ಸರ್ಕಾರ ಸೇನೆಯ ಕೈಗೊಂಬೆ, ಮಾತುಕತೆಯಿಂದ ಯಾವುದೆ ಪ್ರಯೋಜನವಿಲ್ಲ ಎಂದು 2 ದಿನ ಹಿಂದೆ ವಿದೇಶಾಂಗ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಅಭಿಪ್ರಾಯಪಟ್ಟಿದ್ದರು. ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರದಲ್ಲಿ ಮಾತುಕತೆ ಪ್ರಸ್ತಾಪವಾಗುತ್ತಿದ್ದಂತೆ, ವಿದೇಶಾಂಗ ಸಚಿವಾಲಯ ಒಪ್ಪಿಕೊಂಡಿದೆ.
ನ್ಯೂಯಾರ್ಕ್ನಲ್ಲಿ ಮಾಸಾಂತ್ಯಕ್ಕೆ ನಡೆಯುವ ವಿಶ್ವಸಂಸ್ಥೆ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಸಭೆ ಆಯೋಜಿಸಲಾಗಿದೆ. ಈ ಸಭೆಗೂ ಮೊದಲು ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕ್ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆೆ.
ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಾಗಿ ನಡೆಯಲು ಸಾಧ್ಯವಿಲ್ಲ ಎನ್ನುವುದು ನರೇಂದ್ರ ಮೋದಿ ಸರ್ಕಾರದ ನಿಲುವಾಗಿತ್ತು. ಆದರೆ ಈಗ ಯೂ-ಟರ್ನ್ ಹೊಡೆದಿದ್ದು, ಈ ಸರ್ಕಾರದ ವಿದೇಶಾಂಗ ನೀತಿ ಏನೆಂದು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಮಾತುಕತೆ ಪ್ರಯತ್ನ
# ಪಾಕಿಸ್ತಾನದ ಹಿಂದಿನ ಪ್ರಧಾನಿ ನವಾಜ್ ಷರೀಫ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ
# ಭೇಟಿ ಬಳಿಕ ಪಾಕಿಸ್ತಾನ ಪಠಾಣ್ಕೋಟ್ ದಾಳಿ ನಡೆಸಿದ್ದಕ್ಕೆ ಸಾರ್ಕ್ ಶೃಂಗಕ್ಕೆ ಬಹಿಷ್ಕಾರ
# ಉರಿ ಸೇನಾ ಕ್ಯಾಂಪ್ ಮೇಲಿನ ದಾಳಿ ಬಳಿಕ ವಿದೇಶಾಂಗ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಹಂತದ ಸಭೆಯನ್ನೂ ರದ್ದುಪಡಿಸಿದ ಭಾರತ
ಸಾರ್ಕ್ ಸಭೆಗೆ ಮೋದಿಗೆ ಆಹ್ವಾನ
ಇಸ್ಲಾಮಾಬಾದ್ನಲ್ಲಿ ನಡೆಯುವ ಸಾರ್ಕ್ ಸಭೆಗೆ ಆಗಮಿಸುವಂತೆ ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಆಹ್ವಾನಿ ಸಿದ್ದಾರೆ. ಈ ಭೇಟಿಯೊಂದಿಗೆ ಭಾರತ ಹಾಗೂ ಪಾಕಿಸ್ತಾನದ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲು ಸಾಧ್ಯವಿದೆ ಎಂದು ಪತ್ರದಲ್ಲಿ ಖಾನ್ ಹೇಳಿದ್ದಾರೆ.
ಅಮೆರಿಕ ಮೆಚ್ಚುಗೆ!
ಭಾರತವು ಗಡಿ ಹಾಗೂ ಆಂತರಿಕ ಭಯೋತ್ಪಾದನೆ ನಿಗ್ರಹದಲ್ಲಿ ಯಶಸ್ಸು ಸಾಧಿಸುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಪಾತ್ರ ಮೆಚ್ಚುವಂತದ್ದು ಎಂದು ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ. ಗಡಿ ಪ್ರದೇಶದಲ್ಲಿನ ಭಯೋತ್ಪಾದಕ ಚಟುವಟಿಕೆಗೆ ಪಾಕಿಸ್ತಾನದ ಕುಮ್ಮಕ್ಕಿದೆ ಎಂದು ಭಾರತ ಹೇಳುತ್ತಿದೆ. ಇದನ್ನು ಹೊರತುಪಡಿಸಿ ಭಾರತದಲ್ಲಿ ಆಂತರಿಕವಾಗಿಯೂ ಉಗ್ರ ಚಟುವಟಿಕೆಗಳಿವೆ ಎಂದು ಅಮೆರಿಕದ ‘ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಗ್ರ ವಾನಿಗೆ ಪಾಕ್ ಅಂಚೆ ಚೀಟಿ!
ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಿ ಭಾರತೀಯ ಭದ್ರತಾ ಪಡೆಯಿಂದ ಎನ್ಕೌಂಟರ್ ಮಾಡಲಾಗಿದ್ದ ಉಗ್ರ ಬುರಾನ್ ಮುಜಾಪಿರ್ ವಾನಿಯ ಅಂಚೆ ಚೀಟಿಯನ್ನು ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿದೆ. ಈ ಹಿಂದೆ ರೈಲಿನಲ್ಲಿ ಪೋಸ್ಟರ್ ಅಂಟಿಸಿ ವಿವಾದ ಮಾಡಲಾಗಿತ್ತು. ಆದರೆ ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಕಾಶ್ಮೀರ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರ ನೆನಪಲ್ಲಿ ಹೊರತಂದಿರುವ ಅಂಚೆ ಚೀಟಿಯಲ್ಲಿ ವಾನಿ ಚಿತ್ರವನ್ನೂ ಸೇರಿಸಲಾಗಿದೆ.
ಖಾನ್ ಪತ್ರದಲ್ಲೇನಿದೆ?
ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಭಾರತದ ಪ್ರಧಾನಿ ಮೋದಿ ಅಭಿನಂದನಾ ಪತ್ರ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಧನ್ಯವಾದ ಪತ್ರ ಬರೆದಿರುವ ಖಾನ್, ಎರಡು ದೇಶಗಳ ನಡುವಿನ ವಿವಾದ ಬಗೆಹರಿಸಿಕೊಳ್ಳಲು ರಚನಾತ್ಮಕ ಮಾತುಕತೆ ಹಾಗೂ ವ್ಯವಹಾರಗಳೇ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರೀತಿಯ ಮೋದಿ ಸಾಹೇಬ್ ಎಂದು ಪತ್ರ ಆರಂಭಿಸಿರುವ ಇಮ್ರಾನ್, ಭಾರತ ಹಾಗೂ ಪಾಕಿಸ್ತಾನವು ಉತ್ತಮ ಸಂಬಂಧ ಹೊಂದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳದಿರಲು ಸಾಧ್ಯವಿಲ್ಲ. ಆದರೆ ಉಭಯ ದೇಶ ಹಾಗೂ ಜನರ ಭವಿಷ್ಯಕ್ಕಾಗಿ ಶಾಂತಿಯುತ ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ. ಜಮ್ಮು-ಕಾಶ್ಮೀರ, ಸಿಯಾಚಿನ್ ಹಾಗೂ ಸರ್ಕ್ರಿಕ್ ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿಯೋರ್ವರು ಭಯೋತ್ಪಾದನೆ ಕುರಿತು ಪ್ರತಿಕ್ರಿಯಿಸಿದ್ದು, ಪಾಕಿಸ್ತಾನವು ಭಯೋತ್ಪಾದನೆ ಕುರಿತ ಚರ್ಚೆಗೂ ಸಿದ್ಧ. ಹೀಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ನಡೆಯುವ ಸಾರ್ಕ್ ವಿದೇಶಾಂಗ ಸಚಿವರ ಸಭೆಗೂ ಮುನ್ನ ಉಭಯ ದೇಶಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಲಿ ಎಂದು ಆಹ್ವಾನ ನೀಡಿದ್ದಾರೆ.