ಪಾಕಿಸ್ತಾನ ಚುನಾವಣೆ: ಶೇ. 95ರಷ್ಟು ಫಲಿತಾಂಶ ಪ್ರಕಟ, ಸಂಜೆ ವೇಳೆಗೆ ಪೂರ್ಣ ಚಿತ್ರಣ

ಇಸ್ಲಾಮಾಬಾದ್‌: ತೀವ್ರ ಕುತೂಹಲ ಕೆರಳಿಸಿರುವ ಪಾಕಿಸ್ತಾನ ಚುನಾವಣೆ ಫಲಿತಾಂಶ ಇಂದು ಸಂಜೆ ವೇಳೆಗೆ ಹೊರಬೀಳಲಿದ್ದು, ಸದ್ಯದ ಮಾಹಿತಿ ಪ್ರಕಾರ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷ ಸಿಂಗಲ್‌ ಲಾರ್ಜೆಸ್ಟ್‌ ಪಾರ್ಟಿಯಾಗಿ ಹೊರಹೊಮ್ಮಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಶುಕ್ರವಾರ ಮುಂಜಾನೆ ವೇಳೆಗೆ ಪಾಕಿಸ್ತಾನದ ರಾಷ್ಟ್ರೀಯ ಮತ್ತು ನಾಲ್ಕು ಪ್ರಾಂತೀಯ ವಿಧಾನಸಭೆಗಳಲ್ಲಿ ಶೇ. 95ರಷ್ಟು ಫಲಿತಾಂಶ ಹೊರಬಿದ್ದಿದ್ದು, ಸಂಜೆ ವೇಳೆಗೆ ಬಹುತೇಕ ಫಲಿತಾಂಶ ಘೋಷಣೆಯಾಗಲಿದೆ.

# 269 ವಿಧಾನಸಭೆ ಸೀಟುಗಳ ಪೈಕಿ ಪಿಟಿಐ 109 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

# ಶೆಹಬಾಜ್ ಷರೀಫ್‌ ಪಾಕಿಸ್ತಾನಿ ಮುಸ್ಲಿಂ ಲೀಗ್‌ ನವಾಜ್‌ ಕೇವಲ 63 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಫಲಿತಾಂಶವನ್ನು ನಿರಾಕರಿಸಿ, ಚುನಾವಣೆಯಲ್ಲಿ ವಂಚನೆ ನಡೆದಿದ್ದು, ಫಲಿತಾಂಶವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು.

# ಪಾಕಿಸ್ತಾನಿ ಪೀಪಲ್‌ ಪಾರ್ಟಿ ಮೂರನೇ ಸ್ಥಾನಕ್ಕೆ ಇಳಿದಿದ್ದು, 39 ಸೀಟುಗಳನ್ನು ಗೆದ್ದಿದೆ.

# ಇನ್ನುಳಿದ 20 ಕ್ಷೇತ್ರಗಳ ಫಲಿತಾಂಶ ಹೊರಬೀಳಬೇಕಿದ್ದು, ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.

# ಸರ್ಕಾರ ರಚನೆಗೆ 137 ಸರಳ ಬಹುಮತದ ಅಗತ್ಯವಿದ್ದು, ಯಾವೊಂದು ಪಕ್ಷವು ಬಹುಮತ ಪಡೆಯದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಇಮ್ರಾನ್‌ ಖಾನ್‌ ರ ಪಿಟಿಐ ಪಕ್ಷ ನ್ಯಾಷನಲ್‌ ಅಸೆಂಬ್ಲಿಯಲ್ಲಿ 109, ಪಂಜಾಬ್‌ನಲ್ಲಿ 118, ಸಿಂಧ್‌ನಲ್ಲಿ 20, ಖೈಬರ್‌-ಪಂಕ್ತುಂನ್ವದಲ್ಲಿ 66 ಮತ್ತು ಬಲೂಚಿಸ್ತಾನದಲ್ಲಿ 4 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಪಿಎಂಎಲ್‌-ಎನ್‌ ಪಕ್ಷವು ನ್ಯಾಷನಲ್‌ ಅಸೆಂಬ್ಲಿಯಲ್ಲಿ 63, ಪಂಜಾಬ್‌ನಲ್ಲಿ 127, ಸಿಂಧ್‌ನಲ್ಲಿ ಖಾತೆಯನ್ನೇ ತೆರೆಯದೆ ಖೈಬರ್‌-ಪಂಕ್ತುಂನ್ವದಲ್ಲಿ 5 ಮತ್ತು ಬಲೂಚಿಸ್ತಾನದಲ್ಲಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪಿಪಿಪಿ ಪಕ್ಷವು ನ್ಯಾಷನಲ್‌ ಅಸೆಂಬ್ಲಿಯಲ್ಲಿ 42, ಪಂಜಾಬ್‌ನಲ್ಲಿ 6, ಸಿಂಧ್‌ನಲ್ಲಿ 71, ಖೈಬರ್‌-ಪಂಕ್ತುಂನ್ವದಲ್ಲಿ 4 ಸ್ಥಾನಗಳಿಗೆ ಬಲೂಚಿಸ್ತಾನದಲ್ಲಿ ನೆಲೆಯನ್ನೇ ಕಳೆದುಕೊಂಡಿದೆ.

ಇನ್ನುಳಿದಂತೆ ನ್ಯಾಷನಲ್‌ ಅಸೆಂಬ್ಲಿಯಲ್ಲಿ 20 ಸೀಟು, ಪಂಜಾಬ್‌ನಲ್ಲಿ 6, ಸಿಂಧ್‌ನಲ್ಲಿ 11, ಕೆಪಿಯಲ್ಲಿ 2 ಮತ್ತು ಬಲೂಚಿಸ್ತಾನದಲ್ಲಿ ಫಲಿತಾಂಶ ಹೊರಬೀಳಬೇಕಿದೆ ಎಂದು ಚುನಾವಣ ಆಯೋಗ ತಿಳಿಸಿದೆ. (ಏಜೆನ್ಸೀಸ್)