ಇಸ್ಲಾಮಾಬಾದ್: ಅಲ್ ಖಾದಿರ್ ಟ್ರಸ್ಟ್ನ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ಗೆ 14 ವರ್ಷ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಸ್ಥಾಪಿಸಲಾಗಿರುವ ಕೋರ್ಟ್ ನಲ್ಲಿ ಅಲ್ ಖಾದಿರ್ ವಿಶ್ವವಿದ್ಯಾಲಯ ಪ್ರಾಜೆಕ್ಟ್ ಟ್ರಸ್ಟ್ಗೆ ಸಂಬಂಧಿಸಿದ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಯಿತು. ಶಿಕ್ಷೆ ಪ್ರಕಟಿಸಿದ ಬಳಿಕ ಕೋರ್ಟ್ ಹಾಲ್ನಲ್ಲಿದ್ದ ಬುಷ್ರಾ ಬೀಬಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಇಮ್ರಾನ್ ಖಾನ್ ಮತ್ತು ಬುಷ್ರಾ ಬೀಬಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ?
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಸಮಯದಲ್ಲಿ ಸರ್ಕಾರದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿತ್ತು. ಪಿಟಿಐ ಸರ್ಕಾರದ ಅವಧಿಯಲ್ಲಿ ಬ್ರಿಟನ್ ಪಾಕಿಸ್ತಾನಕ್ಕೆ ಹಿಂದಿರುಗಿಸಿದ್ದ 50 ಬಿಲಿಯನ್ ರೂಪಾಯಿಗಳಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಹಲವು ಶತಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. 2022ರಲ್ಲಿ ಅಧಿಕಾರದಿಂದ ಕೆಳಗಿಳಿದ ಇಮ್ರಾನ್ ಖಾನ್, ಪಾಕ್ ಸೇನೆಯ ವಿರುದ್ಧ ಹಲವು ಆಂದೋಲನಗಳನ್ನು ಆಯೋಜಿಸಿದ್ದರು. ಜತೆಗೆ ಸೇನೆಯ ಜನರಲ್ಗಳ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನೆಯ ನಿರ್ದೇಶನದಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಮ್ರಾನ್ ಖಾನ್ಗೆ ಪ್ರಕರಣದ ವಿಚಾರಣೆ ವೇಳೆ ವಾದ ಮಂಡಿಸಲು ಸೂಕ್ತ ಅವಕಾಶ ನೀಡಲಿಲ್ಲ ಎಂದು ಪಿಟಿಐ ನಾಯಕರು ಆರೋಪಿಸಿದ್ದಾರೆ.