ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಪದಗ್ರಹಣ

ಇಸ್ಲಾಮಾಬಾದ್​: ಮಾಜಿ ಕ್ರಿಕೆಟರ್​ ಇಮ್ರಾನ್​​ ಖಾನ್​ ಅವರು ಇಂದು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಸ್ಲಾಮಾಬಾದ್​ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್​ ಹುಸೇನ್​ ಅವರ ನಿವಾಸ ‘ಐವಾನ್​ ಇ ಸಾದರ್​’ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಬೆಳಗ್ಗೆ 9.30ಕ್ಕೆ ಆಯೋಜನೆಗೊಂಡಿದ್ದ ಸಮಾರಂಭ ಸ್ವಲ್ಪ ತಡವಾಗಿ 10 ಗಂಟೆ ಆರಂಭವಾಯಿತು. ಕಪ್ಪು ಬಣ್ಣದ ಶೇರ್ವಾನಿ ಧರಿಸಿದ್ದ ಇಮ್ರಾನ್​ ಖಾನ್​ ಇಸ್ಲಾಮಾಬಾದ್​ನ ತಮ್ಮ ನಿವಾಸ ‘ಬನಿಗಾಲ’ದಿಂದ ಅಧ್ಯಕ್ಷರ ನಿವಾಸಕ್ಕೆ ಆಗಮಿಸಿದರು. ಇದಕ್ಕೂ ಮೊದಲೇ ಇಮ್ರಾನ್​ ಖಾನ್​ ಅವರ ಪತ್ನಿ ಬುಶ್ರಾ ಇಮ್ರಾನ್​ ಸಮಾರಂಭಕ್ಕೆ ಆಗಮಿಸಿದ್ದರು.

ದೇಶ ವಿದೇಶದ ಗಣ್ಯರು, ಹಂಗಾಮಿ ಪ್ರಧಾನಿ ಸಾಸಿರ್​ ಉಲ್​ ಮುಲ್ಕ, ಸ್ಪೀಕರ್​ ಅಸಾದ್​ ಖೈಸರ್​, ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಬಾಜ್ವಾ, ವಾಯುಸೇನೆ ಮುಖ್ಯಮಸ್ಥ ಮುಜಾಹಿದ್​ ಅನ್ವರ್​ ಖಾನ್​ ಮತ್ತು ನೌಕ ಪಡೆಯ ಮುಖ್ಯಸ್ಥ ಜಾಫರ್​ ಮಹಮದ್​ ಅಬ್ಬಾಸಿ, ಕ್ರಿಕೆಟ್​ ರಂಗದ ಒಡನಾಡಿಗಳೂ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದಲ್ಲದೆ, ಭಾರತದ ಮಾಜಿ ಕ್ರಿಕೆಟರ್​ ಪಂಜಾಬ್​ನ ಸಚಿವ ನವಜೋತ್​ ಸಿಂಗ್​ ಸಿದು ಕೂಡ ಇಮ್ರಾನ್​ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರನ್ನು ಸೇನಾ ಪಡೆಯ ಮುಖ್ಯಸ್ಥ ಖಮರ್​ ಜಾವೇದ್​ ಬಾಜ್ವಾ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಪಾಕಿಸ್ತಾನದ ರಾಷ್ಟ್ರಗೀತೆಯ ಮೂಲಕ ಸಮಾರಂಭವನ್ನು ಆರಂಭವಾಯಿತು. ಇದೇ ಸಮಾರಂಭದಲ್ಲೇ ಖುರಾನ್​ನ ಸಂದೇಶಗಳನ್ನು ಪಠಿಸಲಾಯಿತು. ನಂತರ ಪಾಕಿಸ್ತಾನದ ಅಧ್ಯಕ್ಷ ಮಮೂನ್​ ಹುಸೈನ್​ ಅವರು ಇಮ್ರಾನ್​ ಖಾನ್​ ಅವರಿಗೆ ಪ್ರಮಾಣವ ವಚನ ಬೋಧಿಸಿದರು. ಈ ಮೂಲಕ ಮಾಜಿ ಕ್ರಿಕೆಟರ್​ ಇಮ್ರಾನ್​ ಖಾನ್​ ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಇತ್ತೀಚೆಗಷ್ಟೇ ಪಾಕಿಸ್ತಾನದ ಸಂಸತ್​ಗೆ ನಡೆದ 25ನೇ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್​ ಖಾನ್​ ಅವರ ಪಿಟಿಐ 116 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ದೇಶದ ಮೀಸಲು ಕ್ಷೇತ್ರಗಳ ಫಲಿತಾಂಶವನ್ನು ಅಲ್ಲಿನ ಚುನಾವಣೆ ಆಯೋಗ ಪ್ರಕಟಿಸಿದ ನಂತರ ಅವರ ಪಿಟಿಐನ ಗಳಿಗೆ 158ಕ್ಕೆ ಏರಿತ್ತು. ತಾವು ಪ್ರಧಾನಿಯಾಗುವುದು ನಿಶ್ಚಯವಾಗುತ್ತಿದ್ದಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್​, ದೇಶದಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದ್ದರು. ಅಲ್ಲದೆ, ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ತಾವು ಎರಡು ಹೆಜ್ಜೆ ಮುಂದಿಡುವುದಾಗಿಯೂ ತಿಳಿಸಿದ್ದರು.

1992ರ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಇಮ್ರಾನ್​ ಖಾನ್​ ಅವರು ಜಯದತ್ತ ಯಶಸ್ವಿಯಾಗಿ ಮುನ್ನಡೆಸಿದ್ದರು.