More

    ಉಯಿಘರ್​ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿರುವ ಚೀನಾ ಸರ್ಕಾರದ ವಿರುದ್ಧ ನಾವು ಮಾತನಾಡುವುದಿಲ್ಲ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

    ದಾವೋಸ್​: ಚೀನಾದಲ್ಲಿ ಉಯಿಘರ್​ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಅವರ ದುರವಸ್ಥೆ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಹೇಳಿದ್ದಾರೆ.

    ಸ್ವಿಜರ್ಲ್ಯಾಂಡ್​ನ ದಾವೋಸ್​ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ಫೋರಮ್​ನ ವೇಳೆ ವಿದೇಶಾಂಗ ನೀತಿ ಬಗ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಚೀನಾದ ಜಿಂಝಿಯಾಂಗ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಉಯಿಘರ್​ ಮುಸ್ಲಿಮರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಆದರೆ ಚೀನಾ ಸರ್ಕಾರ ನಮಗೆ ಸಹಾಯ ಮಾಡುತ್ತಿರುವ ಕಾರಣಕ್ಕೆ ನಾವು ಆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಮೌನ ವಹಿಸಿದ್ದೇವೆ ಎಂದು ಹೇಳಿದರು.

    ಕಾಶ್ಮೀರದ ವಿಚಾರದಲ್ಲೂ ಚೀನಾ ನಮ್ಮ ಬೆಂಬಲಕ್ಕೆ ನಿಂತಿತ್ತು. ಚೀನಾದೊಂದಿಗೆ ಯಾವುದೇ ಸಮಸ್ಯೆಯಿದ್ದರೂ ನಾವದನ್ನು ಖಾಸಗಿಯಾಗಿ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಸಾರ್ವಜನಿಕವಾಗಿ ದೊಡ್ಡದು ಮಾಡಿಕೊಳ್ಳುವುದಿಲ್ಲ. ನಮಗೆ ಚೀನಾ ಸದಾ ಸಹಕಾರ ನೀಡುತ್ತಿದೆ. ಈ ಕಾರಣಕ್ಕೆ ನಾವದಕ್ಕೆ ಯಾವಾಗಲೂ ಕೃತಜ್ಞರಾಗಿರಲೇಬೇಕು ಎಂದಿದ್ದಾರೆ.

    ಅಷ್ಟೇ ಅಲ್ಲದೆ ಉಯಿಘರ್​ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಹೀಗಿರುವಾ ಚೀನಾ ಸರ್ಕಾರ ವಿರುದ್ಧ ಮಾತನಾಡುವುದು ಸರಿಯಲ್ಲ ಎನ್ನಿಸುತ್ತದೆ. ಅಷ್ಟಕ್ಕೂ ಕಾಶ್ಮೀರದಲ್ಲಿ ನಡೆಯುತ್ತಿರುವ ದಬ್ಬಾಳಿಕೆಗೆ ಹೋಲಿಸಿದರೆ ಇದೆಲ್ಲ ಏನೂ ಅಲ್ಲ ಎಂದು ಹೇಳಿದರು.

    ಉಯಿಘರ್​ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಚೀನಾ ಸರ್ಕಾರದ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಉಯಿಘರ್​ ಅಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಅವರನ್ನು ಬಂಧನ ಕೇಂದ್ರಕ್ಕೆ ಕಳಿಸುವ ಮೂಲಕ, ಆ ಸಮುದಾಯದ ಧಾರ್ಮಿಕ ಆಚರಣೆಗಳಲ್ಲಿ ಇಲ್ಲದ ಹಸ್ತಕ್ಷೇಪ ಮಾಡುವ ಮೂಲಕ ಚೀನಾ ಸರ್ಕಾರ ಹಿಂಸೆ ನೀಡುತ್ತಿದೆ ಎಂದು ಹಲವು ಬಾರಿ ವರದಿಯಾಗಿದೆ. ಹಲವು ದೇಶಗಳು ಇದನ್ನು ಖಂಡಿಸಿದ್ದರೂ ಪಾಕಿಸ್ತಾನ ಮಾತ್ರ ಮೌನವಾಗಿಯೇ ಇದೆ. ಯಾವುದೇ ಆಕ್ಷೇಪವನ್ನೂ ತೆಗೆದಿಲ್ಲ.

    ಕಳೆದ ಆಗಸ್ಟ್​ನಲ್ಲಿ ಭಾರತ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗ ಬಹುತೇಕ ರಾಷ್ಟ್ರಗಳು ಭಾರತದ ಪರ ನಿಂತಿದ್ದರೂ ಚೀನಾ ಮಾತ್ರ ಪಾಕ್​ನ್ನು ಬೆಂಬಲಿಸಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts