ಸೇನೆ ನೆರಳಲ್ಲಿ ಇಮ್ರಾನ್ ಖಾನ್ ನಡೆ

| ಎನ್. ಪಾರ್ಥಸಾರಥಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು

ಕ್ರಿಕೆಟರ್ ಆಗಿ ಹೆಸರು ಮಾಡಿದ್ದ ಇಮ್ರಾನ್ ಖಾನ್ ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿದ್ದಾರೆ. 1996ರಲ್ಲಿ ಅವರು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಸ್ಥಾಪಿಸಿದರೂ ಅವರಾಗಲಿ, ಅವರ ಪಕ್ಷವಾಗಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣೆಯಲ್ಲೇ ಅವರ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ಬಾರಿಯ ಗೆಲುವು ಕೂಡ ಇಮ್ರಾನ್ ಚರಿಷ್ಮಾ ಅಥವಾ ರಾಜಕೀಯ ಕಾರ್ಯಸೂಚಿಯಿಂದ ದೊರೆತದ್ದಲ್ಲ ಎಂಬುದು ಸ್ಪಷ್ಟ. ಅಲ್ಲದೆ, ಪಾಕಿಸ್ತಾನದ ಚುನಾವಣೆಗಳು ಅಲ್ಲಿಯ ಸೇನೆಯ ನೆರಳಲ್ಲೇ, ಅದರ ಆಣತಿಯಂತೆ ನಡೆಯುತ್ತವೆ ಎಂಬುದನ್ನೂ ನಾವು ಗಮನಿಸಬೇಕು. ಮಾಜಿ ಪ್ರಧಾನಿ ನವಾಜ್ ಷರೀಫ್ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡಿದ್ದರಿಂದಲೇ ಮಗಳೊಡನೆ ಜೈಲು ಸೇರುವಂತಾಯಿತು. ಇನ್ನು, ಬೆನಜೀರ್ ಭುಟ್ಟೋ ಕೂಡ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡವರೇ. ಹಾಗಾಗಿ, ಅವರ ಪುತ್ರ ಬಿಲಾವಲ್ ಭುಟ್ಟೋ ಮೇಲೆ ಸೇನೆಗೆ ನಂಬಿಕೆ ಇಲ್ಲ. ಹೀಗಾಗಿ ಸೇನೆಗೆ ಉಳಿದಿದ್ದ ಆಯ್ಕೆ ಇಮ್ರಾನ್ ಖಾನ್ ಮಾತ್ರ! ಇಮ್ರಾನ್​ರ ಪಿಟಿಐ ಪಕ್ಷವನ್ನು ಸೇರುವಂತೆ, ಅದಕ್ಕೆ ಮತ ಹಾಕಿ ಗೆಲ್ಲಿಸುವಂತೆ ಸೇನೆ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜನರ ಮೇಲೆ, ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತ ಬಂದಿತ್ತು ಎಂಬುದನ್ನು ಗಮನಿಸಿದರೆ ಚುನಾವಣೆಯಲ್ಲಿ ಸೇನೆಯ ಪಾತ್ರವನ್ನು ನಾವು ಸುಲಭವಾಗಿಯೇ ಊಹಿಸಬಹುದು. ಅಷ್ಟಾಗಿಯೂ, ಇಮ್ರಾನ್​ರ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿಲ್ಲ. ಸರ್ಕಾರ ರಚನೆ ಮಾಡಬೇಕಾದರೆ ಪಕ್ಷೇತರರ ಬೆಂಬಲ ಅನಿವಾರ್ಯ. ಈ ಚಿತ್ರಣ ಇನ್ನಷ್ಟೇ ಹೊರಬೀಳಬೇಕಿದೆ. ಆದಾಗ್ಯೂ ಈ ಚುನಾವಣೆ ಕೆಲ ಸ್ಪಷ್ಟ ಸಂದೇಶಗಳನ್ನು ರವಾನಿಸಿದೆ. ಇಮ್ರಾನ್ ಖಾನ್ ಪಕ್ಷ ಪ್ರಬಲ ರಾಜಕೀಯ ಶಕ್ತಿಯಾಗಿ ಹೊಮ್ಮಿಲ್ಲವಾದ್ದರಿಂದ ಅದು ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸೇನೆಯ ಸಮ್ಮತಿ ತೆಗೆದುಕೊಳ್ಳುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ಸೇನೆ ಹೇಳಿದಷ್ಟೇ ಕೇಳುವ ಕೆಲಸ ಅವರದಾದರೂ ಅಚ್ಚರಿಯಿಲ್ಲ. ಖಾನ್ ಈಗಾಗಲೇ ಅಮೆರಿಕವನ್ನು ವಿರೋಧಿಸಿದ್ದಾರೆ. ಆದ್ದರಿಂದ ಚೀನಾದ ಸ್ನೇಹ ಅವರಿಗೆ ಅನಿವಾರ್ಯ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತದ ವಿಷಯದಲ್ಲಿ ಪಾಕ್ ಆಕ್ರಮಕ ಹೆಜ್ಜೆಯನ್ನು ಇರಿಸುವ ಸಾಧ್ಯತೆ ತೀರಾ ಕ್ಷೀಣ ಎಂದೇ ಹೇಳಬಹುದು. ಹಾಗಾಗಿ, ಭಾರತ ಹೆಚ್ಚೇನು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿಲ್ಲ. ಮುಖ್ಯವಾಗಿ, ಕಾಶ್ಮೀರ ವಿಷಯ ಪಾಕಿಸ್ತಾನದ ರಾಜಕಾರಣಿಗಳಿಗೆ ‘ಉದ್ಯಮ’ ಇದ್ದಂತೆ. ಅದೇ ವಿಷಯವನ್ನು ಹೇಳಿ ಮತ ಪಡೆಯುತ್ತಾರೆ, ಜನರ ಭಾವನೆ ಕೆರಳಿಸುತ್ತಾರೆ, ಹಣ ಸಂಗ್ರಹಿಸುತ್ತಾರೆ. ಭಯೋತ್ಪಾದನೆಯನ್ನೂ ಹರಡುತ್ತಾರೆ. ಆದರೆ, ಇತ್ತ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ‘ಆಪರೇಷನ್ ಅಲೌಟ್’ ಹೆಸರಿನಲ್ಲಿ ಅದು ಆ ಕಣಿವೆ ರಾಜ್ಯದಲ್ಲಿ ಉಗ್ರನಿಗ್ರಹ ಕಾರ್ಯವನ್ನು ಚುರುಕುಗೊಳಿಸಿದೆ. ಸೇನೆಯ ಈ ನಡೆಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವೂ ಇದೆ. ಆದರೂ ಒಂದಂಶದ ಬಗ್ಗೆ ಭಾರತ ಎಚ್ಚರ ವಹಿಸಬೇಕಿದೆ. ಅದೇನೆಂದರೆ, ಇಮ್ರಾನ್ ಖಾನ್​ಗೆ ತೀವ್ರವಾದಿ ಗುಂಪುಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಬೆಂಬಲ ನೀಡಿವೆ. ಮುಂದೆ, ಅವು ಸರ್ಕಾರದ ಮೇಲೆ ಒತ್ತಡ ಹೇರಿ ಭಾರತವಿರೋಧಿ ಚಟುವಟಿಕೆಗಳಿಗೆ ಪ್ರಚೋದಿಸಬಹುದು. ಅಲ್ಲಿನ ಸೇನೆ ಯಾವುದೇ ಚುನಾಯಿತ ಸರ್ಕಾರವನ್ನು ಪೂರ್ಣಾವಧಿ ನಡೆಯಲು ಬಿಟ್ಟಿಲ್ಲ. ಹೀಗಾಗಿ, ಇಮ್ರಾನ್ ಪಕ್ಷ ಅಧಿಕಾರಕ್ಕೆ ಬಂದರೂ ಸೇನಾಡಳಿತದ ಛಾಯೆ ಇದ್ದೇ ಇರುತ್ತದೆ. ಪೂರ್ಣ ಬಹುಮತವಿಲ್ಲದ, ತೀವ್ರವಾದಿಗಳ ಸ್ನೇಹ-ಸಂಪರ್ಕ ಹೊಂದಿರುವ ಮತ್ತು ಸೇನೆಯ ಮಾತಿಗೆ ತಲೆದೂಗುವ ಅನಿವಾರ್ಯತೆ ಇರುವ ಪ್ರಧಾನಿಗೆ ಅಲ್ಲಿನ ಆಂತರಿಕ ಸ್ಥಿತಿಗಳನ್ನು ಪರಿಹರಿಸುವುದೇ ದೊಡ್ಡ ಸವಾಲು ಆಗುತ್ತದೆ. ಆದ್ದರಿಂದ ಪಾಕಿಸ್ತಾನದ ಈ ಹೊಸ ಸರ್ಕಾರದಿಂದ ಭಾರತದ ಮೇಲೆ ಹೆಚ್ಚೇನು ಪರಿಣಾಮವಾಗದು ಎಂದು ಹೇಳುವುದು ಅವಾಸ್ತವಿಕವೇನೂ ಆಗದು.

ಮಿಲಿಟರಿ ಆಡಳಿತದ ಅವಧಿ

  • 1958-1971: ಮೇಜರ್ ಜನರಲ್ ಐ.ಮಿರ್ಜಾ, ಜನರಲ್ ಅಯೂಬ್ ಖಾನ್, ಜನರಲ್ ಯಾಹ್ಯಾ ಖಾನ್
  • 1977-1988: ಜನರಲ್ ಮುಹಮದ್ ಜಿಯಾ ಉಲ್ ಹಕ್
  • 1999-2008: ಜನರಲ್ ಪರ್ವೆಜ್ ಮುಷರಫ್

ಚುನಾವಣಾ ಅಕ್ರಮದ ಕೋಲಾಹಲ

ಪಾಕಿಸ್ತಾನದ 31ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅಧಿಕಾರವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. 70 ನಾಮ ನಿರ್ದೇಶಿತ ಸದಸ್ಯರನ್ನು ಸೇರಿಸಿ ಒಟ್ಟು 342 ಸಂಖ್ಯಾ ಬಲದ ಪಾಕಿಸ್ತಾನ ಸಂಸತ್​ನಲ್ಲಿ ಅಧಿಕಾರಕ್ಕೇರಲು 172 ಸದಸ್ಯರ ಬೆಂಬಲ ಬೇಕು. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು 117 ಸದಸ್ಯರನ್ನು ಹೊಂದಿದ್ದು, ನಾಮ ನಿರ್ದೇಶನ ಸೇರಿ ಒಟ್ಟು 160 ಸಂಖ್ಯೆ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ರಚನೆಗೆ 12 ಸದಸ್ಯರ ಅಗತ್ಯವಿದೆ. ಈಗಾಗಲೇ ಎಂಕ್ಯೂಎಂ ಪಕ್ಷವು ಪಿಟಿಐಗೆ ಬೆಂಬಲ ಸೂಚಿಸಿದ್ದು, 23 ಪಕ್ಷೇತರ ಸದಸ್ಯರಲ್ಲಿ ಕೆಲವರ ಬೆಂಬಲ ಪಡೆದು ಸರ್ಕಾರ ರಚಿಸುವ ತವಕದಲ್ಲಿ ಇಮ್ರಾನ್ ಖಾನ್ ಇದ್ದಾರೆ. ಇದಲ್ಲದೆ ಪಂಜಾಬ್ ಹಾಗೂ ಕೆಪಿಕೆ ಪ್ರಾಂತ್ಯದಲ್ಲಿಯೂ ಸರ್ಕಾರ ರಚಿಸುವುದಾಗಿ ಪಿಟಿಐ ಹೇಳಿಕೊಂಡಿದೆ. ಏತನ್ಮಧ್ಯೆ ಇಮ್ರಾನ್ ಖಾನ್ ವಿರೋಧಿ ರಾಜಕೀಯ ಪಕ್ಷಗಳು ಚುನಾವಣೆ ಅಕ್ರಮದ ಕುರಿತ ಚರ್ಚೆಗೆ ಸಭೆ ಕರೆದಿದ್ದು, ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ ಸಭೆಯಿಂದ ದೂರ ಉಳಿದಿದೆ. ಆದರೆ ಮತ ಎಣಿಕೆ ಅಕ್ರಮ ಕುರಿತು ಯಾವುದೇ ತನಿಖೆ ಹಾಗೂ ಚರ್ಚೆಗೆ ಸಿದ್ಧ ಎಂದು ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ.

ಶುಕ್ರವಾರ ಏನೇನಾಯ್ತು?

  • ಧಾರ್ವಿುಕ ಮುಖಂಡರ ಎಂಎಂಎಂ ಪಕ್ಷದಿಂದ ಇಮ್ರಾನ್ ಖಾನ್ ವಿರುದ್ಧ ಅಭಿಯಾನ
  • ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಎಂಕ್ಯೂಎಂ-ಪಿ ಪಕ್ಷ
  • ಪಕ್ಷೇತರ ಸದಸ್ಯರನ್ನು ಸೆಳೆಯಲು ಪಿಟಿಐ ಪ್ರಯತ್ನ, ಪಿಪಿಪಿ ಜತೆಗಿನ ಮೈತ್ರಿ ಅಲ್ಲಗಳೆದ ಪಿಟಿಐ.
  • ಗೆದ್ದಿರುವ ಸದಸ್ಯರು 14 ದಿನಗಳೊಳಗೆ ಚುನಾವಣೆ ಖರ್ಚು ವೆಚ್ಚದ ಮಾಹಿತಿ ನೀಡಿ ಸದಸ್ಯತ್ವದ ಪ್ರಮಾಣಪತ್ರ ಪಡೆಯಬೇಕು.

 

ಮುಗ್ಗರಿಸಿದ ಮುಖಂಡರು

ಮಾಜಿ ಪ್ರಧಾನಿ ಶಹೀದ್ ಖಾನ್ ಅಬ್ಬಾಸಿ, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ನವಾಜ್ ಷರೀಫ್ ಸಹೋದರ ಶಹಬಾಜ್ ಷರೀಫ್ ಹಾಗೂ ಬಿಲಾವಲ್ ಭುಟ್ಟೋ ಅವರು ರಾಷ್ಟ್ರೀಯ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಶಹಬಾಜ್ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದಿದ್ದರೆ, ಬಿಲಾವಲ್ ಮೂರು ಕಡೆ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಅಬ್ಬಾಸಿ ಸ್ಪರ್ಧಿಸಿದ ಒಂದು ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ಇಮ್ರಾನ್ ಖಾನ್ ಅವರು ಸ್ಪರ್ಧಿಸಿದ ಎಲ್ಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

1947ರ ಬಳಿಕ ಪಾಕಿಸ್ತಾನವು 3 ಸಂವಿಧಾನ, 30 ಪ್ರಧಾನಿ, 15 ಅಧ್ಯಕ್ಷರು, 5 ಬಾರಿ ಮಿಲಿಟರಿ ಆಡಳಿತ ಕಂಡಿದೆ. 71 ವರ್ಷಗಳ ಪಾಕ್ ಇತಿಹಾಸದಲ್ಲಿ ಕೇವಲ ಶೇ.48 ಅವಧಿಗೆ ಪ್ರಜಾತಂತ್ರ ಸರ್ಕಾರದ ಪ್ರಧಾನಿ ಆಡಳಿತ ನಡೆಸಿದ್ದಾರೆ.

ಪ್ರಾಂತ್ಯಗಳ ಕಥೆಯೇನು?

ಪಂಜಾಬ್, ಸಿಂಧ್, ಕೆಪಿಕೆ ಹಾಗೂ ಬಲೂಚಿಸ್ಥಾನಗಳಿಗೂ ಚುನಾವಣೆ ನಡೆದಿದೆ. ಸಿಂಧ್​ನಲ್ಲಿ ಪಿಪಿಪಿ ಅಧಿಕಾರಕ್ಕೆ ಬಂದಿದ್ದರೆ, ಕೆಪಿಕೆನಲ್ಲಿ ಪಿಟಿಐ ಅಧಿಕಾರಕ್ಕೇರಿದೆ. ಪಂಜಾಬ್​ನಲ್ಲಿ ಪಿಎಂಎಲ್-ಎನ್ ಪಕ್ಷವು ಹೆಚ್ಚಿನ ಸ್ಥಾನ ಗೆದ್ದಿದ್ದರೂ ಪಕ್ಷೇತರರ ಬೆಂಬಲ ಪಡೆದು ಪಿಟಿಐ ಸರ್ಕಾರ ರಚಿಸುವ ಸಾಧ್ಯತೆಯಿದೆ. ಬಲೂಚಿಸ್ಥಾನದಲ್ಲಿ ಅತಂತ್ರ ಸ್ಥಿತಿ ನಿರ್ವಣವಾಗಿದೆ.

ನವಾಜ್ ಆವಾಜ್

ಚುನಾವಣೆಯಲ್ಲಿ ಇಮ್ರಾನ್ , ಸೇನೆ ಯಿಂದ ಭಾರಿ ಅಕ್ರಮ ನಡೆದಿದೆ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿ ದ್ದಾರೆ. ಇದೊಂದು ದೋಷಪೂರಿತ ಚುನಾವಣೆಯಾಗಿದ್ದು, ಫಲಿತಾಂಶವನ್ನು ಮಾರ್ಪಡಿಸಲಾಗಿದೆ ಎಂದು ಪಿಎಂಎಲ್-ಎನ್ ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ.