ಪಾಕ್​ ಪ್ರಧಾನಿಯನ್ನು ಕೊಂಡಾಡಿದ ಸುಪ್ರೀಂನ ನಿವೃತ್ತ ನ್ಯಾಯಮೂರ್ತಿ ಭಾರತೀಯರ ಬಗ್ಗೆ ಹೇಳಿದ್ದೇನು?

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿರುವ ಪರಿಸ್ಥಿತಿಯನ್ನು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅವರೊಬ್ಬ ಉತ್ತಮ ರಾಜ್ಯ ನೀತಿಜ್ಞರಾಗಿದ್ದು, ನೊಬೆಲ್​ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಭಾರತದ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಫೆ.14ರಂದು ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿಯ ಕುರಿತು ಮಂಗಳವಾರ ಪಾಕ್​ ಮಾಧ್ಯಮವೊಂದಕ್ಕೆ ದೂರವಾಣಿ ಕರೆ ಮೂಲಕ ಕಟ್ಜು ಅವರು ಮಾತನಾಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಪಾಕ್​ನ ಜಿಯೋ ನ್ಯೂಸ್​ ಸುದ್ದಿ ವಾಚಕ ಹಮೀದ್​ ಮೀರ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಕಟ್ಜು ಅವರು ಇಮ್ರಾನ್​ ಖಾನ್​ ಮಾತುಗಳಿಂದ ತುಂಬಾ ಪ್ರಭಾವಿತಗೊಂಡಿರುವುದಾಗಿ ತಿಳಿಸಿದ್ದಾರೆ.​

ಇಮ್ರಾನ್​ ಖಾನ್​ ಅವರ ಮಾತುಗಳು ಅದ್ಭುತವಾಗಿದ್ದವು. ನಿಜವಾದ ರಾಜ್ಯ ನೀತಿಜ್ಞನ ಗುಣಗಳನ್ನು ಇಮ್ರಾನ್​ ಪ್ರದರ್ಶಿಸುತ್ತಿದ್ದಾರೆ. ಕ್ರಿಕೆಟಿಗ ಹಾಗೂ ರಾಜಕಾರಣಿಯ ಹೊರತಾಗಿ ಅವರೊಬ್ಬ ವಿದ್ವಾಂಸರು. ನಿಮ್ಮ ಪ್ರಧಾನಿಗೆ ನಮ್ಮ ಧನ್ಯವಾದಗಳು ಎಂದು ಕಟ್ಜು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಮ್ರಾನ್​ ಮಾತಿನಲ್ಲಿ ಸಮತೋಲನ, ಪರಿಪಕ್ವತೆ ಹಾಗೂ ಆಳವಾದ ಜ್ಞಾನ ಇದೆ. ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಶಾಂತಿಯುತವಾಗಿ ಮಾತನಾಡುವ ಇಮ್ರಾನ್​ ನುಡಿಗಳಿಂದ ಸಾಕಷ್ಟು ಪ್ರಭಾವಿತಗೊಂಡಿದ್ದೇನೆ. ಅವರ ಮಾತುಗಳು ನಮ್ಮ ಉಪಖಂಡಕ್ಕೆ ಸೀಮಿತವಾಗದೆ ಇಡೀ ವಿಶ್ವಾದ್ಯಂತ ಪ್ರಸಾರವಾಗಬೇಕು. ಅವರು ನೊಬೆಲ್​ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಉತ್ತಮ ನಾಯಕನನ್ನು ನೀವು ಹೊಂದಿದ್ದೀರಿ ಎಂದು ಕೊಂಡಾಡಿದ್ದಾರೆ.

ಭಾರತ ಮತ್ತು ಪಾಕ್​ ನಡುವಿನ ಪರಿಸ್ಥಿತಿಯನ್ನು ನಿಭಾಯಿಸುವ ವಿಚಾರದಲ್ಲಿ ಇಮ್ರಾನ್​ ಖಾನ್​ ಅವರನ್ನು ಹೊಗಳಿ ಕಟ್ಜು ಅವರು ಕಳೆದ ಶನಿವಾರ ಮಾಡಿದ್ದ ಟ್ವೀಟ್, ಭಾರತೀಯರ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಸಾಕಷ್ಟು ಟ್ರೋಲ್​ಗೆ ಗುರಿಯಾಗಿತ್ತು. ನಾನು ಪಾಕಿಸ್ತಾನವನ್ನು ಮೋಸ ಹಾಗೂ ಕೃತಕ ರಾಷ್ಟ್ರ ಎಂದು ಕರೆದಾಗ ಯಾವೊಬ್ಬ ಪಾಕಿಸ್ತಾನಿಯು ನನ್ನನ್ನು ನಿಂದಿಸಲಿಲ್ಲ. ಆದರೆ, ಇಮ್ರಾನ್​ ಖಾನ್​ ಅವರನ್ನು ಹೊಗಳಿದಾಗ ಅನೇಕ ಭಾರತೀಯರು ನನ್ನನ್ನು ಹುಚ್ಚ, ಮುದುಕ, ದೇಶ ದ್ರೋಹಿ ಹಾಗೂ ಪಾಕಿಸ್ತಾನಕ್ಕೆ ಸೇರಿಕೋ ಎಂದೆಲ್ಲಾ ಜರಿದರು. ಈಗ ನೀವೆ ಹೇಳಿ ಯಾರು ಹೆಚ್ಚು ಪಕ್ಷತೆ ಹೊಂದಿದ್ದಾರೆ ಎಂದು ಟ್ವೀಟ್​ ಮಾಡಿದ್ದರು.

ಪಾಕ್​ ವಶದಲ್ಲಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಶಾಂತಿ ಸಂಕೇತವಾಗಿ ಬಿಡುಗಡೆ ಮಾಡುವುದಾಗಿ ಇಮ್ರಾನ್​ ಖಾನ್​ ಪಾಕ್​ ಸಂಸತ್ತಿನಲ್ಲಿ ಹೇಳಿದ ನಂತರವೂ ಇಮ್ರಾನ್​ಗೆ ಶಾಂತಿ ವಿಭಾಗದಲ್ಲಿ ನೊಬೆಲ್​ ನೀಡಬೇಕೆಂದು ಸಚಿವರೊಬ್ಬರು ಪ್ರಸ್ತಾವನೆ ಸಲ್ಲಿಸಿದ್ದರು. (ಏಜೆನ್ಸೀಸ್​)