ಇಮ್ರಾನ್​ ಖಾನ್​ ಪದಗ್ರಹಣ ಸಮಾರಂಭಕ್ಕೆ ಕ್ರಿಕೆಟ್​ ಗೆಳೆಯರು, ಅಮೀರ್​ ಖಾನ್​ಗೆ ಆಹ್ವಾನ

ಇಸ್ಲಮಾಬಾದ್‌: ಪಾಕಿಸ್ತಾನದ ಸಂಭವನೀಯ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಟ ಅಮೀರ್‌ ಖಾನ್‌, ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌ ಮತ್ತು ನವಜೋತ್‌ ಸಿಂಗ್‌ ಸಿಧು ಅವರನ್ನು ಆಹ್ವಾನಿಸಿದ್ದಾರೆ.

ಜು. 25ರಂದು ನಡೆದ ಪಾಕಿಸ್ತಾನ ಅಸೆಂಬ್ಲಿ ಚುನಾವಣೆ ನಂತರ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್‌ ನಂಬರ್‌ ಗಳಿಸದಿದ್ದರೂ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರು ಆಗಸ್ಟ್‌ 11 ರಂದು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ.

ಪಿಟಿಐ ಪಕ್ಷವು ಈಗಾಗಲೇ ಇತರೆ ಪಕ್ಷಗಳು ಮತ್ತು ಸ್ವಂತಂತ್ರ್ಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದು, ಸಮ್ಮಿಶ್ರ ಸರ್ಕಾರವನ್ನು ರಚಿಸಲು ಕಸರತ್ತು ನಡೆಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಸಾರ್ಕ್‌ ದೇಶಗಳನ್ನು ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಇಮ್ರಾನ್‌ ಖಾನ್‌ ನಿರ್ಧರಿಸಿದ್ದರು. ಆದರೆ, ಪಿಟಿಐ ಪಕ್ಷ ಅದನ್ನು ನಿರಾಕರಿಸಿದೆ ಎಂದು ಹಿಂದಿನ ವರದಿಗಳು ತಿಳಿಸಿವೆ. (ಏಜೆನ್ಸೀಸ್)