ಮುಂಬೈ ದಾಳಿ, ಪಾಕ್ ತಪ್ಪೊಪ್ಪಿಗೆ

ಇಸ್ಲಾಮಾಬಾದ್: ವಾಣಿಜ್ಯ ನಗರಿ ಮುಂಬೈನ 26/11 ಉಗ್ರ ದಾಳಿಗೆ ಲಷ್ಕರ್-ಎ ತೊಯ್ಬಾ ಸಂಘಟನೆ ಕಾರಣ ಎನ್ನುವುದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ನಾಯಕರೊಬ್ಬರು ಬಹಿರಂಗವಾಗಿ ಇಂಥ ಹೇಳಿಕೆ ನೀಡಿದ್ದಾರೆ.

ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ ತೊಯ್ಬಾ ಪ್ರಮುಖ ಉಗ್ರ ಝಾಕಿ-ಉರ್-ರೆಹೆಮಾನ್ ಲಖ್ವಿ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಪಾಕ್ ಪ್ರಧಾನಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ವರ್ಷಾರಂಭದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ‘ಡಾನ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಈ ವಿಚಾರವನ್ನು ಷರೀಫ್ ಉಲ್ಲೇಖಿಸಿದ್ದರು.

ಕ್ರಮಕ್ಕೆ ಸಿದ್ಧ ಎಂದ ಇಮ್ರಾನ್: ‘ಮುಂಬೈ ಭಯೋತ್ಪಾದಕ ದಾಳಿ ನಡೆಸಿದವರ ವಿರುದ್ಧ ನಾವು ಕ್ರಮ ಜರುಗಿಸಲು ನಿರ್ಧರಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಲಿ ಸ್ಥಿತಿಗತಿ ಕುರಿತು ವರದಿ ಕೇಳಿದ್ದೇನೆ. ಪಾಕಿಸ್ತಾನದ ಹಿತಾಸಕ್ತಿಯ ಉದ್ದೇಶದಿಂದ ಈ ಪ್ರಕರಣದ ವಿಚಾರಣೆ ನಡೆಸಬೇಕಿದೆ. ಅಷ್ಟಕ್ಕೂ ಇದು ಉಗ್ರ ಚಟುವಟಿಕೆಯಾಗಿದೆ’ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್​ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತದ ಜತೆಗಿನ ಮಾತುಕತೆ ಪ್ರಸ್ತಾಪದ ಬೆನ್ನಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. 2008ರ ನ. 26ರಂದು ಸುಮಾರು 10 ಉಗ್ರರು ಮುಂಬೈನ ವಿವಿಧೆಡೆ ಭಯೋತ್ಪಾದಕ ದಾಳಿ ನಡೆಸಿದ್ದರು. ಭಾರತದಲ್ಲಿನ ಅತಿ ಭಯಾನಕ ಉಗ್ರ ದಾಳಿಯಲ್ಲಿ ಇದೂ ಒಂದು.

ಆಫ್ಘನ್ ಉಗ್ರ ದಾಳಿ ಹಿಂದೆ ಪಾಕ್

ನವದೆಹಲಿ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್​ಜಿಎ) ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತ, ‘ ಅಫ್ಘಾನಿಸ್ತಾನದಲ್ಲಿ ಅಸ್ಥಿರತೆ ಸೃಷ್ಟಿ ಮತ್ತು ಉಗ್ರ ಸಂಘಟನೆಗಳಿಗೆ ಆಶ್ರಯ ತಾಣ ಒದಗಿಸುವುದನ್ನು ಪಾಕ್ ಮುಂದುವರಿಸಿದೆ ’ ಎಂದಿದೆ. ಭಾರತೀಯ ಅಧಿಕಾರಿ ಇನಾಮ್ ಗಂಭೀರ್ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿರುವವರು ಸಂಚು ರೂಪಿಸಿ ದಾಳಿ ನಡೆಸುತ್ತಿದ್ದಾರೆ. ತಾಲಿಬಾನ್, ಹಕ್ಕಾನಿ, ಅಲ್-ಕೈದಾ ಉಗ್ರ ಸಂಘಟನೆಗಳಿಗೆ ಮತ್ತು ಅವರ ಕರಾಳ ಸಿದ್ಧಾಂತಗಳಿಗೆ ಆಶ್ರಯ ತಾಣಗಳು ನೀರೆರೆದು ಪೋಷಿಸಿವೆ. ಉಗ್ರರಿಗೆ ಶಾಂತಿ ಬೇಕಿಲ್ಲ. ಮಾದಕ ವಸ್ತು, ಅಕ್ರಮ ಗಣಿಗಾರಿಕೆಯ ಕಾರ್ಖಾನೆಗಳನ್ನು ಇವರು ನಿರ್ವಿುಸಿಕೊಂಡಿದ್ದಾರೆ ಎಂದಿದ್ದಾರೆ. ಅಫ್ಘಾನಿಸ್ತಾನದ ಸಂಪನ್ಮೂಲಗಳನ್ನು ಉಗ್ರರು ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಬಳಸುತ್ತಿದ್ದಾರೆ ಎಂದು ಇನಾಮ್ ಆತಂಕ ವ್ಯಕ್ತಪಡಿಸಿದರು.

230 ಉಗ್ರರ ಬೇಟೆ, 240 ಬಾಕಿ!

ಕಳೆದೊಂದು ವರ್ಷದಲ್ಲಿ ಕಾಶ್ಮೀರ ಕಣಿವೆಯಲ್ಲಿ 230 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಆದಾಗ್ಯೂ ಇನ್ನೂ 240 ಉಗ್ರರು ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಕೆಲ ವಿದೇಶಿ ಉಗ್ರರೂ ಸೇರಿದ್ದಾರೆ. ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ತಯಾರಿಸಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸೇನೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.

ಸೇನೆ ಸೇರಿದ 259 ಕಾಶ್ಮೀರಿಗಳು

ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುತ್ತಿರುವ ಕಾಶ್ಮೀರಿಗಳ ಸಂಖ್ಯೆ ಹೆಚ್ಚಾಗಿದೆ. ಕಣಿವೆ ರಾಜ್ಯದ 259 ಯುವಕರು ಹೊಸದಾಗಿ ಸೇನೆ ಸೇರಿದ್ದಾರೆ. ಇವರು ಜಮ್ಮು-ಕಾಶ್ಮೀರ ಲೈಟ್ ಇನ್ಪೆಂಟ್ರಿ ಬಟಾಲಿಯನ್​ನಲ್ಲಿದ್ದು, ಉಗ್ರ ನಿಗ್ರಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. 1 ವರ್ಷದ ವಿಶೇಷ ತರಬೇತಿ ಬಳಿಕ ಇವರನ್ನು ಸೇನೆಗೆ ಸೇರಿಸಿಕೊಳ್ಳಲಾಗಿದೆ.

ಮುಂಬೈ ದಾಳಿಯನ್ನು ಯಾರು ನಡೆಸಿದ್ದಾರೆ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯಕ್ಕೂ ಗೊತ್ತಿದೆ. ನಮಗೆ ಯಾರ ಹೇಳಿಕೆ ಅಗತ್ಯವೂ ಇಲ್ಲ. ಆದರೆ ಅವರು ಒಪ್ಪಿಕೊಂಡಿರುವುದು ಒಳ್ಳೆಯದು. ದಾಳಿಕೋರರ ವಿರುದ್ಧ ಸೂಕ್ತ ಕ್ರಮದ ಅಗತ್ಯವೂ ಇದೆ.

| ಜನರಲ್ ಬಿಪಿನ್ ರಾವತ್ ಭೂಸೇನೆ ಮುಖ್ಯಸ್ಥ