ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮುಗ್ಧ ಕಾಶ್ಮೀರಿಗಳನ್ನು ಕೊಲ್ಲಲಾಗುತ್ತಿದೆ: ಪಾಕ್​ ಪ್ರಧಾನಿ

ಶ್ರೀನಗರ: ಮನೆಯಲ್ಲಿ ಅಡಗಿದ್ದ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದ ವೇಳೆ ಉಂಟಾದ ಶೆಲ್​ ಸ್ಫೋಟದಿಂದ ಮೃತಪಟ್ಟ ನಾಗರಿಕರ ಸಾವಿಗೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸಂತಾಪ ಸೂಚಿಸಿದ್ದು, ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಮುಗ್ಧ ಕಾಶ್ಮೀರಿಗಳನ್ನು ಕೊಲ್ಲುವ ಹೊಸ ಬೆಳವಣಿಗೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈಗಲಾದರೂ ಭಾರತ ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ. ಕಾಶ್ಮೀರಿಗಳ ಒಳ್ಳೆಯದಕ್ಕಾಗಿ ವಿಶ್ವಸಂಸ್ಥೆಯ ನಿರ್ಣಯಗಳ ಮೇಲೆ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕಿದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಟ್ವೀಟ್​ ಮೂಲಕ ಸಂದೇಶ ರವಾನಿಸಿದ್ದಾರೆ.

ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರ ಶೋಧ ಕಾರ್ಯಾಚರಣೆ ವೇಳೆ ನಡೆದ ಎನ್​ಕೌಂಟರ್​ ವೇಳೆ ಉಗ್ರರು ಅಡಗಿದ್ದ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಅಲ್ಲೇ ಹತ್ತಿರದಲ್ಲಿ ಬಿದ್ದಿದ್ದ ಶೆಲ್​ಗೆ ಬೆಂಕಿ ತಾಕಿ ಸ್ಫೋಟಗೊಂಡು ಆರು ನಾಗರಿಕರು ಸಾವಿಗೀಡಾಗಿ 40 ಮಂದಿ ಗಾಯಗೊಂಡಿದ್ದರು. (ಏಜೆನ್ಸೀಸ್​)

ಕುಲ್ಗಾಮ್​ನಲ್ಲಿ ಸ್ಫೋಟ: ಆರು ನಾಗರಿಕರು ಸಾವು, 40 ಜನರಿಗೆ ಗಾಯ