More

  ರಾಮಾಯಣದ ತತ್ವಗಳ ಅಳವಡಿಕೆಯಿಂದ ಸಮಾಜದ ಸುಧಾರಣೆ ಸಾಧ್ಯ

  ಮಡಿಕೇರಿ: ರಾಮಾಯಣದ ಅಧ್ಯಯನ ಹಾಗೂ ಅದರಲ್ಲಿರುವ ತತ್ವಗಳ ಅಳವಡಿಕೆಯಿಂದ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಬಿ.ಎಚ್.ತಳವಾರ್ ಅಭಿಪ್ರಾಯಪಟ್ಟರು.


  ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಆದಿಕವಿ ಮಹರ್ಷಿ ವಾಲ್ಮೀಕಿ ಮತ್ತು ಅವರ ವಿರಚಿತ ರಾಮಾಯಣದ ಪ್ರಸ್ತುತೆಯ ಬಗ್ಗೆ ಸಮಗ್ರವಾಗಿ ವಿವರಿಸಿದರು.


  ಭಾರತದಾದ್ಯಂತ ಪ್ರತಿವರ್ಷ ಸೀಗೆ ಹುಣ್ಣಿಮೆಯಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಗೆ ಆದಿಕವಿಯ ಮಹಾನ್ ರಾಮಾಯಣ ಗ್ರಂಥವೇ ಆಧಾರ ಎಂದು ಅಭಿಪ್ರಾಯಪಟ್ಟರು.


  ಇಂಗ್ಲೀಷ್ ಸಹ ಪ್ರಾಧ್ಯಾಪಕಿ ಡಾ.ನಯನಾ ಕಶ್ಯಪ್ ಮಾತನಾಡಿ, ರಾಮಾಯಣದಲ್ಲಿ ರಾಮನ ಪಾತ್ರವನ್ನು ಮಹರ್ಷಿ ವಾಲ್ಮೀಕಿ ಅಧ್ಭುತವಾಗಿ ಚಿತ್ರಿಸಿದ್ದಾರೆ. ರಾಮ ಎಂದರೆ ಒಂದು ಜೀವನ ತತ್ವ ಮತ್ತು ಜೀವನ ಕ್ರಮ, ರಾಮನ ಪೂರ್ವಭಾಷಿಕ ಗುಣ ಆದರ್ಶವಾದದ್ದು ಎಂದರು.


  ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಬೇಟೆಗಾರನಾಗಿದ್ದವನ ಬದುಕು ನಾರದನೆಂಬ ಗುರುವಿನ ಮಾರ್ಗದರ್ಶನದಿಂದ ಪರಿವರ್ತನೆಗೊಂಡು ಅಧ್ಭುತವಾದ ರಾಮಾಯಣದ ರಚಿಸುವ ವಾಲ್ಮೀಕಿಯಾದದ್ದು, ಆತುರದಲ್ಲಿ ಭಾವೋದ್ವೇಗದಲ್ಲಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳ ಬಾರದೆಂಬ ಸಂದೇಶ ರಾಮಾಯಣದಿಂದ ತಿಳಿದು ಬರುತ್ತದೆ ಎಂದರು.


  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೇಜರ್ ಪ್ರೊ. ಬಿ.ರಾಘವ ಮಾತನಾಡಿ, ನಮ್ಮ ಬದುಕು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದೆ. ಅದರೊಂದಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮರೆಯಾಗಬಾರದು. ನಮ್ಮ ಮುಂದಿನ ಪೀಳಿಗೆಯ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕಾದರೆ ಆದಿಕವಿ ಮಹರ್ಷಿ ವಾಲ್ಮೀಕಿಯಂತಹ ಮಹಾನ್ ವ್ಯಕ್ತಿಗಳ ವಿಚಾರಧಾರೆಯನ್ನು ಆಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.


  ಪ್ರತಿಯೊಬ್ಬರೂ ವಾಲ್ಮೀಕಿ ರಾಮಾಯಣ ಕೃತಿಯನ್ನು ಜೀವನದಲ್ಲೊಮ್ಮೆ ಓದಬೇಕು. ಅದರಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಲಹೆ ನೀಡಿದರು.


  ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಸಿ.ಸಿ ಘಟಕವು ಆಯೋಜಿಸಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರರು ಹಾಜರಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರು ಹಾಗೂ ಗಣಿತಶಾಸ್ತ್ರ ಮುಖ್ಯಸ್ಥ ಡಾ.ಆರ್.ರಾಜೇಂದ್ರ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಸಿ.ಎಂ.ಸಂಜನಾ, ಸಿ.ಎಂ.ಯೋಗಿನಿ ಪ್ರಾರ್ಥಿಸಿದರು, ಗಣಕ ಶಾಸ್ತ್ರ ಸಹಪ್ರಾಧ್ಯಾಪಕ ಎಂ.ಎನ್.ರವಿಶಂಕರ್ ನಿರೂಪಿಸಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts