ಪಿ.ಎಚ್.ಕೃಷ್ಣಮೂರ್ತಿ, ಮಾಯಕೊಂಡ

ದಿನೇದಿನೆ ಬಿಸಿಲ ಬೇಗೆ ಹೆಚ್ಚುತ್ತಿದ್ದು ಸಾರ್ವಜನಿಕರು ಹಣ್ಣು ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ 32-33 ಡಿಗ್ರಿ ಸೆಲ್ಸಿಯಸ್ಗೆ ತಾಪಮಾನ ಏರಿದೆ. ಪರಿಣಾಮ ಬಿಸಿಲಿಗೆ ದೇಹವನ್ನು ತಂಪಾಗಿರಿಸುವ ಕಲ್ಲಂಗಡಿ ಮತ್ತು ಕರಬೂಜ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಅನೇಕ ಕಡೆ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ವಿುಸಿ ಕಲ್ಲಂಗಡಿ, ಕರಬೂಜ ಹಣ್ಣನ್ನು ಮಾರಲಾಗುತ್ತಿದೆ. ಬಿಸಿಲು ಹೆಚ್ಚಾದಂತೆಲ್ಲ ಕಲ್ಲಂಗಡಿಯ ಬೆಲೆಯೂ ಹೆಚ್ಚಾಗುತ್ತಿದೆ. ಕಳೆದ ವಾರ ಪ್ರತಿ ಕೆಜಿಗೆ 15 ರೂ. ಇತ್ತು, ಆದರೆ ಈ ವಾರ 20 ರೂ. ಆಗಿದೆ. ಇನ್ನು ಕತ್ತರಿಸಿಟ್ಟ ಹೋಳು ಕಲ್ಲಂಗಡಿ 15 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಕೆಜಿಗೆ 10 ರಿಂದ 15 ರೂ. ಇರುತ್ತದೆ. ಆದರೆ ಈಗ ಬೆಲೆ ಹೆಚ್ಚಾದರೂ, ಖರೀದಿ ಮಾತ್ರ ಜೋರಾಗಿಯೇ ನಡೆದಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಎರಡು ತಳಿಗಳು ಇವೆ. ಒಂದು ಕಿರಣ್, ಇನ್ನೊಂದು ನಾಮಧಾರಿ. ಕಿರಣ್ ತಳಿಗೆ ಬೇಡಿಕೆ ಹಾಗೂ ಬೆಲೆ ಎರಡೂ ಹೆಚ್ಚು. ನಾಮಧಾರಿ ಹಣ್ಣು ರುಚಿಯಾದರೂ ಬೆಲೆ ಸ್ವಲ್ಪ ಕಡಿಮೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ನಾಮಧಾರಿ ತಳಿಯನ್ನು ಜಿಲ್ಲೆಯಲ್ಲಿ ಬೆಳೆದರೆ, ಕಿರಣ್ ತಳಿ ಕಲ್ಲಂಗಡಿ ಹಣ್ಣನ್ನು ತಮಿಳುನಾಡಿನಿಂದ ಆಮದು ಕೊಳ್ಳಲಾಗುತ್ತದೆ. ನಾಮಧಾರಿ ದೊಡ್ಡ ಹಣ್ಣು ಇದ್ದಷ್ಟು ಬೇಡಿಕೆ ಹೆಚ್ಚು. ಆದರೆ ಕಿರಣ್ ತಳಿ ಹಾಗಲ್ಲ. ಅದು ನೋಡಲು ಚಿಕ್ಕ ಗಾತ್ರ ಇದ್ದರೂ ವ್ಯಾಪಾರ ಮಾತ್ರ ಚೆನ್ನಾಗಿ ಆಗುತ್ತದೆ ಎಂದು ವ್ಯಾಪಾರಿ ಪೀರ್ ಅಹಮದ್ ತಿಳಿಸಿದರು.
ಪ್ರಸ್ತುತ ಕಲ್ಲಂಗಡಿ ಸೀಜನ್ ಪ್ರಾರಂಭವಾಗಿದೆ. ತಮಿಳುನಾಡಿನಿಂದ ಪ್ರತಿ ಟನ್ ಕಲ್ಲಂಗಡಿ ತಂದು ಮಾರಾಟ ಮಾಡಲು 26 ಸಾವಿರ ರೂ. ವೆಚ್ಚವಾಗುತ್ತದೆ. ಇದರ ಮೇಲೆ ಕೆಜಿಗೆ 2 ರಿಂದ 3 ರೂ. ಹೆಚ್ಚು ಏರಿಕೆ ಮಾಡಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ.
ಫೆಬ್ರವರಿ ಆರಂಭದಲ್ಲೇ ಬಿಸಿಲು ನೆತ್ತಿ ಸುಡುತ್ತಿದ್ದು, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆದ ಕಾರಣ ಸ್ಥಳೀಯ ಬೇಡಿಕೆಗೆ ತಕ್ಕಷ್ಟು ಹಣ್ಣು ಪೂರೈಕೆಯಾಗುತ್ತಿಲ್ಲ. ಅಲ್ಲದೇ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಸುಗ್ಗಿ ಈಗ ಆರಂಭಗೊಂಡಿರುವುದರಿಂದ ಆವಕದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ಬೇಡಿಕೆ ಜತೆಗೆ ಬೆಲೆಯೂ ಹೆಚ್ಚಳವಾಗಿದೆ.
ವಾರೊಪ್ಪತ್ತಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಹೀಗಾಗಿ ತಮಿಳುನಾಡು, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಹಣ್ಣು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ವರ್ಷ ಸೈಕ್ಲೋನ್ ಪರಿಣಾಮದಿಂದಾಗಿ ತಮಿಳುನಾಡಿನಲ್ಲಿ ಕಲ್ಲಂಗಡಿ ಬೆಳೆ ಇಳುವರಿ ಕುಂಠಿತಗೊಂಡಿದ್ದು ಶಿವರಾತ್ರಿಗೆ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಹಾಗೂ ಶಿವರಾತ್ರಿ ಹಬ್ಬದ ಸಮಯಕ್ಕೆ ಬೆಳೆ ಕಟಾವಾಗುವಂತೆ ನೂರಾರು ಹೆಕ್ಟೇರ್ನಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದರು.
ಕಳೆದ ಬಾರಿ ಮಾರುಕಟ್ಟೆಯಲ್ಲಿ ಸಗಟು ದರ ಕುಸಿದಿದ್ದರಿಂದ ರೈತರು ಕಲ್ಲಂಗಡಿ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ ಎಂದು ಪ್ರಗತಿಪರ ರೈತ ಕೊಡಗನೂರು ಮಂಜುನಾಥ ಬಾಬರ್ ತಿಳಿಸಿದರು.
ಮಾಯಕೊಂಡ ಗ್ರಾಮದ ರೈತ ಎಂ.ವಿ.ಲಕ್ಷ್ಮಣ್ 2 ಎಕರೆ ಜಮೀನಿನಲ್ಲಿ ಕಪ್ಪು ಬಣ್ಣದ ಕಲ್ಲಂಗಡಿ ಬೆಳೆದಿದ್ದು ಶಿವರಾತ್ರಿ ಹಬ್ಬಕ್ಕೆ ಕಟಾವು ಮಾಡಲಿದ್ದು, ಉತ್ತಮ ಬೆಲೆ ಸಿಗಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ.
ಶಿವರಾತ್ರಿಗೆ ಏರೀತೆ ದರ? : ಮಾರುಕಟ್ಟೆಯಲ್ಲಿ ಕಲ್ಲಂಗಡಿ ಸಗಟು ವ್ಯಾಪಾರದ ಬೆಲೆ ಪ್ರತಿ ಕೆಜಿಗೆ 10 ರಿಂದ 15 ರೂ. ಇದೆ. ಚಿಲ್ಲರೆ ಮಾರಾಟಗಾರರು ಕೆಜಿಗೆ 20 ರಿಂದ 25 ರೂ.ಗಳಿಗೆ ಮಾರಾಟ ಮಾಡುತ್ತಿದ್ದು, ಶಿವರಾತ್ರಿ ವೇಳೆ ಕೆಜಿಗೆ 30 ರಿಂದ 35 ತಲುಪುವ ಭರವಸೆ ರೈತರದು.
ದಿನಕ್ಕೆ 50 ಟನ್ ಕಲ್ಲಂಗಡಿ ಮಾರಾಟ: ಪ್ರಸ್ತುತ ದಾವಣಗೆರೆ ನಗರದಲ್ಲಿ ದಿನವೊಂದಕ್ಕೆ 30 ರಿಂದ 35 ಟನ್ ಕಲ್ಲಂಗಡಿ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ದಿನಕ್ಕೆ 50 ಟನ್ಗಿಂತ ಹೆಚ್ಚು ಕಲ್ಲಂಗಡಿ ಮಾರಾಟವಾಗುತ್ತಿದೆ. ಕಲ್ಲಂಗಡಿ ಪೂರೈಕೆ ಒಂದು ವೇಳೆ ಕಡಿಮೆಯಾದಲ್ಲಿ ಪರ್ಯಾಯವಾಗಿ ಕರ್ಬೂಜ ಹಣ್ಣು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದರು.
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತರೆ ಖರ್ಚು ಸೇರಿ 2 ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ಸರಾಸರಿ 70 ರಿಂದ 75 ಸಾವಿರ ರೂ. ವೆಚ್ಚವಾಗಿದೆ. ಕಲ್ಲಂಗಡಿ ಬಳ್ಳಿ ಕಾಯಿಗಳನ್ನು ಬಿಟ್ಟಿದ್ದು ಎರಡು ದಿನಕ್ಕೊಮ್ಮೆ ಬೆಳಗ್ಗೆ ನೀರು ಹಾಯಿಸುತ್ತಿದ್ದೇನೆ.
| ಎಂ.ವಿ. ಲಕ್ಷ್ಮಣ್, ಯುವ ರೈತ
ದಾವಣಗೆರೆ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಅಡಕೆ ಬೆಳೆ ಬೆಳೆಯುತ್ತಿದ್ದು, ಇದರ ಪ್ರಮಾಣ ಹೆಚ್ಚುತ್ತಿದೆ. ಕೆಲವು ತಾಲೂಕುಗಳಲ್ಲಿ ಮಾತ್ರ ಹಣ್ಣು, ತರಕಾರಿ ಬೆಳೆಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಕೇವಲ 28 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕಲ್ಲಂಗಡಿ ಬೆಳೆಯಲಾಗಿದೆ.
| ರಾಘವೇಂದ್ರ ಪ್ರಸಾದ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿನ ಇಳುವರಿ ಕಡಿಮೆಯಾದ್ದರಿಂದ ಶಿವರಾತ್ರಿಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಹಣ್ಣನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
| ಪೀರ್ ಅಹಮದ್, ಕಲ್ಲಂಗಡಿ ವ್ಯಾಪಾರಿ, ಚನ್ನಗಿರಿ