ಅಳವಂಡಿ: ಕೃಷಿಯ ಸುಸ್ಥಿರತೆಗಾಗಿ ಹೊಸ ಅಭಿವೃದ್ಧಿ ಮೂಲಕ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವುದೇ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯ ಗುರಿ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್ ಕುಷ್ಟಗಿ ತಿಳಿಸಿದರು.
ಸಮೀಪದ ಹಟ್ಟಿ ಗ್ರಾಮದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ, ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ್-ಕೆ-ಸಾಶ್ವಿಹಳ್ಳಿ, ಬೆಂಗಳೂರಿನ ಟೆರ‌್ರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಲಾನಯನ ಅಭಿವೃದ್ಧಿ ಕಾರ್ಯಕಾರಿಣಿ ಸಮಿತಿಯ ಗ್ರಾಮಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ:ಜಲಾನಯನ ಯೋಜನೆ ಲಾಭ ಪಡೆದುಕೊಳ್ಳಿ- ಮೌಲ್ಯಮಾಪನ ಅಧಿಕಾರಿ ಸಲಹೆ
ರೈತರು, ಸರ್ಕಾರಿ ಜಮೀನು ಮತ್ತು ಪ್ರದೇಶಗಳಲ್ಲಿ ನೀರು ಹರಿಯುವ ಹಳ್ಳ-ಕೊಳ್ಳಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆ ಕೈಕೊಳ್ಳಲಾಗುವುದು. ತೋಟಗಾರಿಕೆ, ಕೃಷಿ ಅರಣ್ಯ ಬೆಳೆ ಪದ್ಧತಿ ಮುಖಾಂತರ ರೈತರ ಆದಾಯ ಮೂಲ ಹೆಚ್ಚಿಸುವುದು ಮತ್ತು ಹಸಿರು ಹೊದಿಕೆ ಹೆಚ್ಚಿಸಿ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದರು.
ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿಯೊಂದಿಗೆ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು. ಯೋಜನಾ ವ್ಯಾಪ್ತಿಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಕೌಶಲ ತರಬೇತಿ, ಸಣ್ಣ ಪ್ರಮಾಣದ ಸ್ವ ಉದ್ಯೋಗಕ್ಕೆ ಅನುಕೂಲ ಮಾಡಿ ಕೊಡುವ ಉದ್ದೇಶ ಇದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಪರ್ವೀನ್ ಬಾನು, ಉಪಾಧ್ಯಕ್ಷ ನಿಂಗನಗೌಡ, ಪಿಡಿಒ ರತ್ನವ್ವ, ಕಾರ್ಯದರ್ಶಿ ಮಂಜುನಾಥಯ್ಯ, ಕೃಷಿ ಅಧಿಕಾರಿ ಬಿ.ಎಂ.ಗೊಬ್ಬರಗುಂಪಿ, ಎಎಒ ವೀರೇಶ ಪಟ್ಟೇದ, ಮಾರುತಿ, ಟೆರ‌್ರಿ ಸಂಸ್ಥೆಯ ಮೌಲ್ಯಮಾಪನ ಅಧಿಕಾರಿ ಮೀರಾ ಬೀರಣ್ಣವರ, ಸ್ವೋರ್ಡ್-ಕೆ ಸಂಸ್ಥೆಯ ಡಿಪಿಸಿ ಪ್ರಶಾಂತ, ಕಾರ್ಯದರ್ಶಿ ಚನ್ನಬಸಪ್ಪ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಜಲಾನಯನ ತಂಡದ ಗವಿಸಿದ್ದಪ್ಪ, ವೆಂಕಟೇಶ ಹಳೆಮನಿ, ಬಸನಗೌಡ ಪಾಟೀಲ, ಸಂತೋಷ, ಗವಿಸಿದ್ದಪ್ಪ ಬಾರಕೇರ ಇದ್ದರು.