ಧುಲೆ: ಕಾಂಗ್ರೆಸ್ನ ನಾಲ್ಕನೇ ತಲೆಮಾರು ಬಂದರೂ ದಲಿತರು, ಹಿಂದುಳಿದವರು ಮತ್ತು ಬಡವರಿಗೆ ನೀಡಲಾಗುವ ಮೀಸಲಾತಿ ಯನ್ನು ಮುಸ್ಲಿಮರಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಮಹಾರಾಷ್ಟ್ರದ ಧುಲೆಯಲ್ಲಿ ಸಾರ್ವಜನಿಕ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಉಲೇಮಾಗಳು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿ, ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಕೋರಿದ್ದರು. ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ ದಲಿತರು, ಹಿಂದುಳಿದವರು ಮತ್ತಿತರರಿಗೆ ಇರುವ ಮೀಸಲಾತಿಯನ್ನು ಕಡಿತ ಮಾಡಬೇಕಾಗುತ್ತದೆ. ರಾಹುಲ್ ಬಾಬಾ ನೀವು ಮಾತ್ರವಲ್ಲ, ನಿಮ್ಮ ನಾಲ್ಕನೇ ತಲೆಮಾರು ಬಂದರೂ ಎಸ್ಸಿ, ಎಸ್ಟಿ ಮತ್ತು ಓಬಿಸಿಗಳಿಗೆ ನಿಗದಿಯಾಗಿರುವ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿ ಸ್ವರ್ಗದಿಂದ ಹಿಂದಿರುಗಿದರೂ ಇದು ಸಾಧ್ಯವಿಲ್ಲ. ಕಾಶ್ಮೀರದ ಲಾಲ್ಚೌಕ್ಗೆ ಭೇಟಿ ನೀಡಿದಾಗ ನನಗೆ ಭಯವಾಗಿತ್ತು ಎಂದು ಆಗಿನ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದರು. ಈಗ ಅವರು ಮೊಮ್ಮಕ್ಕಳೊಂದಿಗೆ ಕಾಶ್ಮೀರಕ್ಕೆ ಹೋಗಿ ರಜಾದಿನ ಕಳೆಯಬಹುದು. ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಷಾ ಹೇಳಿದರು.
ತೇಜಸ್ವಿ ಸೂರ್ಯ ಟೀಕೆ: ತಂಬಾಕು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟ್ ಪ್ಯಾಕೆಟ್ ಮೇಲೆ ಬರೆದಿರುವ ರೀತಿಯಲ್ಲೇ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದು ರಾಜ್ಯ ಮತ್ತು ದೇಶದ ಸಾಮಾಜಿಕ- ಆರ್ಥಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಮುಂಬೈನಲ್ಲಿ ಮಾತನಾಡಿ, ಕರ್ನಾಟಕ ತೀವ್ರ ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಸ್ಲಿಂ ಓಲೈಕೆಗೆ ಯತ್ನಿಸುತ್ತಿದೆ. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ನೂರಾರು ಎಕರೆ ಕೃಷಿ ಭೂಮಿಯನ್ನು ವಕ್ಪ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಸಿಎಂ ನಿರ್ದೇಶನದಂತೆ ವಕ್ಪ್ ಅದಾಲತ್ತುಗಳನ್ನು ನಡೆಸಲಾಗಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿಗಳನ್ನು ನೀಡಲು ಸಂವಿಧಾನ ಅನುಮತಿ ನೀಡುವುದಿಲ್ಲ. ಆದರೆ ಕಾಂಗ್ರೆಸ್ ಇದನ್ನು ಉಲ್ಲಂಘಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಟೀಕೆ ಮಾಡಿದರು.
ಕಾಂಗ್ರೆಸ್ ರಾಜಕುಮಾರನ ಪಿತೂರಿ: ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ರದ್ದು ಗೊಳಿಸಲು ಕಾಂಗ್ರೆಸ್ ರಾಜಕುಮಾರ ಪಿತೂರಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ. ಜಾರ್ಖಂಡದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಹಿಂದುಳಿದವರ ಮೀಸಲಾತಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲಾಗುತ್ತದೆ ಎಂದು ಹೇಳಿದರು. ಈ ಮೊದಲು ರಾಜಕುಮಾರನ ತಂದೆ ಮೀಸಲಾತಿಯನ್ನು ಗುಲಾಮಗಿರಿ, ಜೀತ ಪದ್ಧತಿ ಎಂದು ಟೀಕೆ ಮಾಡಿದ್ದರು. ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಜಾಹೀರಾತುಗಳನ್ನು ನೀಡಿದ್ದರು. ಆದರೆ ಅವರು ಮುಂದಿನ ಚುನಾವಣೆಯಲ್ಲಿ ಸೋಲು ಕಂಡರು. ಈಗ ಕಾಂಗ್ರೆಸ್ ಮತ್ತೆ ಇದೇ ಯತ್ನಕ್ಕೆ ಮುಂದಾಗಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ರಾಜೀವ್ ಗಾಂಧಿಯನ್ನು ಅವರು ಟೀಕಿಸಿದರು. ಜಾರ್ಖಂಡದಲ್ಲಿ ನುಸುಳುಕೋರರ ಹಾವಳಿ ತೀವ್ರವಾಗಿದೆ. ಸ್ಥಳೀಯ ಜನಸಂಖ್ಯೆ ಅರ್ಧಕ್ಕೆ ಕುಸಿತವಾಗಿದೆ. ಜೆಎಂಎಂ ನೇತೃತ್ವದ ಸರ್ಕಾರ ಅಕ್ರಮ ನುಸುಳುಕೋರರಿಗೆ ಶಾಶ್ವತ ನಾಗರಿಕತ್ವ ನೀಡುತ್ತಿದೆ ಎಂದು ಪ್ರಧಾನಿ ಪ್ರಧಾನಿ ಹರಿಹಾಯ್ದರು.
ಔರಂಗಜೇಬ್ ಅಭಿಮಾನಿಗಳ ಒಕ್ಕೂಟ: ಸೋನಿಯಾ ಗಾಂಧಿ- ಮನಮೋಹನ್ ಸಿಂಗ್ ಆಡಳಿತದಲ್ಲಿ ಕಾಶ್ಮೀರಕ್ಕೆ ಭಯೋತ್ಪಾದಕರು ಮುಕ್ತವಾಗಿ ಬಂದು ಬಾಂಬ್ ಸ್ಫೋಟ ನಡೆಸುತ್ತಿದ್ದರು. ನಕ್ಸಲರು ಮತ್ತು ಉಗ್ರರನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪ್ರತಿಪಕ್ಷಗಳ ಮಹಾವಿಕಾಸ ಅಘಾಡಿ ಔರಂಗಜೇಬ್ ಅಭಿಮಾನಿಗಳ ಒಕ್ಕೂಟವಾಗಿದೆ. ಆದರೆ ಬಿಜೆಪಿ ನೇತೃತ್ವದ ಮಹಾಯುತಿ, ಶಿವಾಜಿ ಮಹಾರಾಜ್ ಹಾಗೂ ಸಾವರ್ಕರ್ ಅವರ ತತ್ವಗಳನ್ನು ಪಾಲಿಸುತ್ತಿದೆ. ಉದ್ಧವ್ ಠಾಕ್ರೆ ರಾಮಮಂದಿರ ನಿರ್ವಣವನ್ನು ವಿರೋಧಿಸಿದ್ದರು. ತ್ರಿವಳಿ ತಲಾಕ್, 370ನೇ ವಿಧಿ ರದ್ಧತಿ, ಸರ್ಜಿಕಲ್ ದಾಳಿ ವಿರೋಧಿಸಿದ್ದರು. ಬಾಳಾ ಸಾಹೇಬ್ ಠಾಕ್ರೆ ತತ್ವಗಳನ್ನು ಅವರು ಮರೆತಿದ್ದಾರೆ ಎಂದು ಅಮಿತ್ ಷಾ ಟೀಕಿಸಿದರು.
ವಕ್ಪ್ ಕಾಯ್ದೆ ತಿದ್ದುಪಡಿ: ದೇಶದ ಜನರು ವಕ್ಪ್ ಕಾಯ್ದೆಯಿಂದ ತೊಂದರೆಗೀಡಾ ಗಿದ್ದಾರೆ. ಕರ್ನಾಟಕದಲ್ಲಿ ಇಡೀ ಗ್ರಾಮವನ್ನೇ ವಕ್ಪ್ ಆಸ್ತಿ ಎಂದು ಘೊಷಣೆ ಮಾಡಲಾಗಿದೆ. ಕಾಯ್ದೆಗೆ ತಿದ್ದುಪಡಿ ಮಸೂದೆ ತಂದಿದ್ದೇವೆ. ಆದರೆ ಇದನ್ನು ರಾಹುಲ್ ಗಾಂಧಿ ಸಹಿತ ಪ್ರತಿಪಕ್ಷದ ನಾಯಕರು ವಿರೋಧಿಸುತ್ತಿದ್ದಾರೆ. ಈ ತಿದ್ದುಪಡಿಯನ್ನು ಪ್ರಧಾನಿ ಮೋದಿ ಜಾರಿಗೆ ತರುವುದು ಖಚಿತ ಎಂದು ಅಮಿತ್ ಷಾ ಹೇಳಿದರು.
ಲಖನೌ ತಂಡದಲ್ಲಿ ನಾನು…LSG ಮಾಲೀಕ ಸಂಜೀವ್ ಜೊತೆಗಿನ ವಿವಾದದ ಕುರಿತು ಮೌನಮುರಿದ KL Rahul
Orange ಜ್ಯೂಸ್ನಿಂದಾಗಿ ಬದಲಾಯ್ತು ಮಹಿಳೆಯ ಬದುಕು; ಲಾಟರಿಯಲ್ಲಿ ಗೆದ್ದಿದ್ದು ಕೋಟಿ ಕೋಟಿ