ಬೆಂಗಳೂರು: ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕೊಡಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಯೋಜನೆಗೆ ಈಗ ರಾಜ್ಯದಲ್ಲಿ ಬಂಡವಾಳದ ಕೊರತೆ ಎದುರಾಗಿದೆ.
ಸ್ವಚ್ಛ ಭಾರತ ಅಭಿಯಾನ ಮುಖೇನ ಸ್ವಚ್ಛ ಪರಿಸರ, ಬಯಲು ಮುಕ್ತ ಶೌಚಗೃಹದತ್ತ ವಿಶೇಷ ಪ್ರಯತ್ನ ನಡೆಸಿದ ಕೇಂದ್ರ ಸರ್ಕಾರ, ಇದೀಗ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ವಿಶೇಷ ಯೋಜನೆ ಕೈಗೆತ್ತಿಕೊಂಡಿದೆ. ಜಲಜೀವನ್ ಯೋಜನೆ ಪ್ರಕಾರ, ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ 7 ಸಾವಿರ ರೂ. ವೆಚ್ಚ ಮಾಡಲಿದೆ. ಇಷ್ಟು ಮೊತ್ತದಲ್ಲಿ ಸಂಪರ್ಕ ಕಷ್ಟ ಸಾಧ್ಯ ಎಂಬುದು ರಾಜ್ಯದ ಅಧಿಕಾರಿಗಳ ವಾದ. ಪ್ರತಿ ಮನೆಗೂ ಶೌಚಗೃಹ ನಿರ್ವಿುಸಲು ಕೇಂದ್ರ 12 ಸಾವಿರ ರೂ. ನೀಡುತ್ತಿತ್ತು. ಕನಿಷ್ಠವೆಂದರೂ 25 ಸಾವಿರ ರೂ. ಬೇಕಾಗುತ್ತದೆ. ಇಂಥದ್ದೇ ಸಮಸ್ಯೆ ನಲ್ಲಿ ನೀರು ಸಂಪರ್ಕದಲ್ಲೂ ಎದುರಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ 85 ಲಕ್ಷ ಮನೆಗಳಿವೆ. ಈಗಿನ ಅಂಕಿ-ಸಂಖ್ಯೆ ಪ್ರಕಾರ, ಶೇ.42 ಮನೆಗಳಿಗೆ ನಲ್ಲಿ ಸಂಪರ್ಕವಿದೆ. ಇನ್ನೂ 45 ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಹೊಸದಾಗಿ ಸಂಪರ್ಕ ಕೊಡಬೇಕಾಗಿದೆ. 2024ರೊಳಗೆ ದೇಶದ ಎಲ್ಲ ಮನೆಗಳೂ ನಲ್ಲಿ ಸಂಪರ್ಕ ಹೊಂದಿರಬೇಕೆಂದು ಕೇಂದ್ರ ಕಾಲಮಿತಿ ನಿಗದಿ ಪಡಿಸಿದೆ. ಹೀಗಾಗಿ ರಾಜ್ಯದಲ್ಲಿ ಉಳಿದ 45 ಲಕ್ಷ ಗ್ರಾಮೀಣ ಮನೆಗಳಿಗೆ ಮುಂದಿನ 4 ವರ್ಷಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲು ಕೇಂದ್ರ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ.
ರಾಜ್ಯಕ್ಕೇನು ಸಮಸ್ಯೆ?: ನೀರಿನ ಮೂಲದಿಂದ ಅಥವಾ ಸಂಗ್ರಹಗಾರಗಳಿಂದ ಪ್ರತಿ ಜನವಸತಿ ಪ್ರದೇಶಕ್ಕೆ ನೀರು ತರಲು ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಬೇಕಾಗುತ್ತದೆ. ಮುಂದಿನ 4 ವರ್ಷಗಳಲ್ಲಿ ಅಷ್ಟು ಹಣ ಹೂಡಿಕೆ ಕಷ್ಟ ಸಾಧ್ಯ. ಕೃಷ್ಣ ಬೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಜಲಧಾರೆ ಯೋಜನೆ ಪರಿಚಯಿಸಿದ್ದರು. ಜಲ ಮೂಲಗಳಿಂದಲೇ ಜನ ವಸತಿಗೆ ನೀರು ಸರಬರಾಜು ಮಾಡುವ 50 ಸಾವಿರ ಕೋಟಿ ರೂ. ಯೋಜನೆ ಅದಾಗಿತ್ತು. ಜಲಧಾರೆಯನ್ನು ಈ ಯೋಜನೆ ಜತೆ ಜೋಡಿಸಿ ಅನುಷ್ಠಾನ ಮಾಡಬಹುದೆಂಬ ಕಲ್ಪನೆ ಸರ್ಕಾರಕ್ಕಿದೆ. ಆದರೆ, ಈ ಯೋಜನೆಗೆ ವೇಗ ಸಿಕ್ಕಿಲ್ಲ. ಏಷ್ಯನ್ ಬ್ಯಾಂಕ್ನಿಂದ ಸಾಲ ಪಡೆದು ಕಾರ್ಯಗತ ಗೊಳಿಸುವ ಕಲ್ಪನೆ ಇತ್ತಾದರೂ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ.
ಹಣಕಾಸು ಇಲಾಖೆ ಸಹ ಯೋಜನೆ ಜಾರಿಗೆ ಹಣಕಾಸು ಹೊಂದಾಣಿಕೆ ಕಷ್ಟವಾಗಬಹುದು. ಹೀಗಾಗಿ ನಿಧಾನಗತಿಯಲ್ಲಿ ಹೋದರೆ ಒಳ್ಳೆಯದೆಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ವಿಜಯಪುರ ಜಿಲ್ಲೆಗೆ 2,100 ಕೋಟಿ ರೂ. ಯೋಜನೆ ಮತ್ತು 2 ಸಾವಿರ ಕೋಟಿ ಮೊತ್ತದಲ್ಲಿ ಮಂಡ್ಯಕ್ಕೆ ಜಲಧಾರೆ ಅನುಷ್ಠಾನಗೊಳಿಸಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಟೆಂಡರ್ ಕರೆಯುವುದಷ್ಟೇ ಬಾಕಿ. ಮುಂದೆ ರಾಯಚೂರು ಮತ್ತು ಕೋಲಾರ ಜಿಲ್ಲೆ ಆಯ್ಕೆ ಮಾಡಲಾಗಿದೆ. ಬಾಗಲಕೋಟೆ, ತುಮಕೂರು, ಧಾರವಾಡದಿಂದಲೂ ಒತ್ತಡ ಇದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಧಾರೆಯನ್ನು ಬಳಸಿಕೊಂಡು ಜಲಜೀವನ್ ಅನುಷ್ಠಾನ ಮಾಡಲು ಪ್ರಯತ್ನಿಸುತ್ತೇವೆ. 2024ರೊಳಗೆ ಪ್ರತಿ ಮನೆಗೂ ನೀರಿನ ಸಂಪರ್ಕ ಕೊಡುವ ಉದ್ದೇಶವಿದೆ.
| ಎಲ್.ಕೆ.ಅತೀಕ್ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಶ್ರೀಕಾಂತ್ ಶೇಷಾದ್ರಿ