ಬಾಗಲಕೋಟೆ: ವಿವಿಧ ಇಲಾಖೆಗಳಲ್ಲಿ ಬರುವ ಕೇಂದ್ರ ಪುರಷ್ಕೃತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರನೇ ತ್ರೈಮಾಸಿಕ ದಿಶಾ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಕಾಮಗಾರಿಗಳು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಶ್ರಮಿಸುವ ಅಗತ್ಯವಿದೆ ಎಂದರು.
ಶಿರೂರ ಕ್ರಾಸ್‌ನಿಂದ ಗದ್ದನಕೇರಿ ಕ್ರಾಸ್‌ವರೆಗೆ ಒಟ್ಟು 24 ಕಿಮೀ ಚತುಷ್ಪಥ ರಸ್ತೆ ಕಾಮಗಾರಿ ವರ್ಷವಾದರೂ ಪೂರ್ಣಗೊಂಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದಲ್ಲಿ ನಮ್ಮ ಗಮನಕ್ಕೆ ತರಬೇಕು. ಕಾಮಗಾರಿಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಅಲ್ಲದೆ, ಪಟ್ಟದಕಲ್ಲದಿಂದ ಶಿರೂರವರೆಗಿನ 26 ಕಿಮೀ ದ್ವಿಪಥ ರಸ್ತೆ ಕಾಮಗಾರಿ ಭೂಸ್ವಾದಿನ ಪ್ರಕ್ರಿಯೆ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯುವಲ್ಲಿ ವಿಳಂಬವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ ಸಂಸದರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳನ್ನು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ತಲುಪಿಸುವ ಕಾರ್ಯವಾಗಬೇಕು. ಮಾತೃವಂದನಾ ಯೋಜನೆ, ಶಾಲಾ ಪೂರ್ವ ಮಕ್ಕಳ ಉಪಹಾರ, ರಾಷ್ಟ್ರೀಯ ಪೋಷನ್ ಅಭಿಯಾನ, ಮಹಿಳಾ ಸಬಲೀಕರಣ ಸೇರಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಸೂಚಿಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಜನರಿಗೆ ಶೇ.90ರಷ್ಟು ಸಹಾಯಧನದಲ್ಲಿ ನೀಡುವ ಕೃಷಿ ಪರಿಕರಣಗಳ ಸಮರ್ಪಕ ವಿತರಣೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಹೇಳಿದರು.
ಜೆಜೆಎಂ ಕಾಮಗಾರಿಗಳನ್ನು ನಾಲ್ಕು ಹಂತಗಳಲ್ಲಿ ಕೈಗೊಳ್ಳಲಾಗಿದ್ದು, ನಲ್ಲಿ ಸಂಪರ್ಕಗಳಿಗೆ ಸರಿಯಾಗಿ ನೀರು ಪೂರೈಸುವ ಕಾರ್ಯವಾಗಬೇಕು. ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಾಕಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಆಗಾಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಬೇಕು. ನೀರಿನ ಸಮಗ್ರ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಸಮಗ್ರ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೇ.95ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಪಸಂಖ್ಯಾತರ ಪಿಎಂಜೆವಿಕೆ ಯೋಜನೆಯಡಿ 6 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಕಾಮಗಾರಿ ಪ್ರಗತಿಯಲ್ಲಿವೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಯಡಿ ಒಟ್ಟು 4.19 ಲಕ್ಷ ಅಸಂಘಟಿಕ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಉದ್ಯೋಗ ಸೃಜನ ಯೋಜನೆಯಡಿ ಸಾಲ ಮಂಜೂರಾದ ಸಣ್ಣ ಕೈಗಾರಿಕೆಗಳಿಗೆ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್ ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಇದ್ದರು.