ವಿಜಯಪುರ: ನಿವೃತ್ತ ನೌಕರರು ಮತ್ತು ಅವರ ಅವಲಂಬಿಸಿದ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್. ಭೈರಪ್ಪ ಆಗ್ರಹಿಸಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ನೌಕರರಿಗೆ ವೇತನ ಆಯೋಗವು ಸಹ ಸಂಧ್ಯಾ ಕಿರಣ ಎಂಬ ಹೆಸರಿನ ಹೊಸ ಆರೋಗ್ಯ ಯೋಜನೆ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅದನ್ನು ತ್ವರಿತವಾಗಿ ಜಾರಿಗೆ ತರಬೇಕು. ನಿವೃತ್ತಿ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಅಂತಹ ಪ್ರಕರಣದಲ್ಲಿ ಅಂತಿಮ ವಿಧಿ ವಿಧಾನಗಳ ವೆಚ್ಚ ನಿರ್ವಹಿಸುವುದಕ್ಕಾಗಿ ಆತ ಅಥವಾ ನಾಮ ನಿರ್ದೇಶಕರಿಗೆ ಹತ್ತು ಸಾವಿರ ರೂ. ಗಳನ್ನು ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೆ, 2022 ಜುಲೈ 1 ರಿಂದ 2024 ಜುಲೈ 31 ರವರೆಗೆ ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಗಳಿಕೆ ರಜೆ ನಗಧೀಕರಣ, ಡಿಸಿಆರ್‌ಜಿ ಹಾಗೂ ಕಮ್ಯೂಟೇಷನ್ ಆರ್ಥಿಕ ಸೌಲಭ್ಯ ನೀಡಬೇಕು. ಈ ಎಲ್ಲ ವಿಷಯಗಳ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಕೂಡಲೇ ಬೇಡಿಕೆ ಈಡೇರಿಸುವಂತೆ ಆಗ್ರಹ ಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಬುರಣಾಪೂರದ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಮತ್ತು ವಿರೂಪಾಕ್ಷ ದೇವರು ಆಶೀರ್ವಚನ ನೀಡಿದರು. ವಿವಿಧ ತಾಲೂಕು ಮತ್ತು ಜಿಲ್ಲೆಗಳ 30 ಜನ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ (ಕಡ್ಲೇವಾಡ) ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಸಿ. ಮಂಜುನಾಥ, ರಂಗೇಗೌಡ, ಎಸ್.ಎಂ. ಆನಂದಪ್ಪ, ಎಸ್. ಶಾರದಮ್ಮ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಎ.ವೈ. ಬೆಂಡಿಗೇರಿ, ಮಲ್ಲಪ್ಪ ಮುದಕವಿ, ವಿ.ಬಿ. ಗೊವಿಂದಪ್ಪ, ಎಸ್.ಎನ್. ಬಿರಾದಾರ, ಡಿ.ಬಿ. ಹಿರೇಕುರಬರ, ಸುಭಾಸ ಬೇಡಗೇರಿ, ಜಿ.ಎಸ್. ದಾವರ, ಜಿ.ಜಿ. ಪಂಚಾಳ, ಜಿ.ಎಸ್. ಸಾವಳಗಿಮಠ, ಎಸ್.ಎಸ್. ಮೆಳ್ಳಗೇರಿ, ಎಸ್.ವಿ. ಹಿರೇಮಠ, ಎಸ್.ಎಸ್. ಸಜ್ಜನ, ಡಿ.ಎಚ್. ಜಾಧವ, ವಿ.ಆರ್. ಅಂಗಡಿ, ರೇಣುಕಾ ಹುಣಸಿಗಿಡದ ಮತ್ತಿತರರಿದ್ದರು.