ಶೃಂಗೇರಿ: ತಾಯಿಹಾಲು ಮಗುವಿಗೆ ಅಮೃತಕ್ಕೆ ಸಮಾನ. ಮಗುವಿನ ಆರೋಗ್ಯಯುತ ಬೆಳವಣಿಗೆಗೆ ತಾಯಿಹಾಲು ಮುಖ್ಯ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವ್ಯೆದ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಇನ್ನರ್‌ವ್ಹೀಲ್ ಸಂಸ್ಥೆ , ಶಾರದಾ ಧನ್ವಂತರಿ ನರ್ಸಿಂಗ್ ಕಾಲೇಜು ಹಾಗೂ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಶಿಶುಮರಣ ತಡೆಗಟ್ಟಲು ಮಗುವಿಗೆ ತಾಯಿ ಹಾಲುಣಿಸಬೇಕು. ಸಮಾಜದ ಆರೋಗ್ಯಕರ ಬೆಳವಣಿಗೆಯಲ್ಲಿ ಮಕ್ಕಳ ಪಾತ್ರ ಅತಿ ಮುಖ್ಯ. ತಾಯಿಹಾಲಿನಿಂದ ಇರುಳುಗಣ್ಣು ಇತ್ಯಾದಿ ಕಾಯಿಲೆಗಳು ಮಕ್ಕಳನ್ನು ಕಾಡುವುದಿಲ್ಲ ಎಂದರು.
ಸ್ತನ್ಯಪಾನ ಮಹತ್ವ ಕುರಿತು ಶಾರದಾ ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಿತು. ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.
ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಚರಿತಾ, ಕಾರ್ಯದರ್ಶಿ ಭೂಮಿಕಾ ಹೆಗಡೆ, ಮಾಜಿ ಅಧ್ಯಕ್ಷರಾದ ಪೂರ್ಣಿಮಾ, ಸುಜಾತಾ, ಡಾ. ಭುವನೇಶ್ವರಿ, ಲತಾ ಶ್ರೀನಿವಾಸ್, ಡಾ. ಪ್ರಣೀತಾ, ಪಿ.ಪಿ.ಬೇಬಿ ಇದ್ದರು.