ಬೆಂಗಳೂರು: ಕೆಪಿಎಸ್ಸಿ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಅನೇಕ ತಪ್ಪುಗಳನ್ನು ಮಾಡಿ , ಪರೀಕ್ಷಾರ್ಥಿಗಳ ಭವಿಷ್ಯವನ್ನೇ ಅಂಧಕಾರದಲ್ಲಿ ದೂಡಿ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಆಯೋಗದ ಪರೀಕ್ಷ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗವಾಲ್ ಹಾಗೂ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಹಾಗೂ ಜಾತಿ ಗಣತಿ ವರದಿಯನ್ನು ಮಂತ್ರಿಮಂಡಲದಲ್ಲಿ ಅನುಮೋದಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯಮಂತ್ರಿ ಚಂದ್ರು ಕೂಡಲೇ ಮರು ಪರೀಕ್ಷೆ ನಡೆಸಬೇಕು ಅಥವಾ ಎಲ್ಲ ಪರೀಕ್ಷಾರ್ಥಿಗಳಿಗೂ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ನೀಡುಬೇಕೆಂದು ಆಗ್ರಹಿಸಿದರು. ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ ತಯಾರು ಮಾಡಿ ನಂತರ ಇನ್ನಿತರ ಭಾಷೆಗಳಲ್ಲಿ ತರ್ಜುಮೆ ಮಾಡುವ ಕನಿಷ್ಠ ಜ್ಞಾನ ಇಲ್ಲಿನ ಅಧಿಕಾರಿಗಳಿಗೆ ಇಲ್ಲದಾಗಿದೆ. ಇಲ್ಲಿಯವರೆಗೂ ಆಯೋಗದಿಂದ ನಡೆಯುತ್ತಿರುವ ಪರೀಕ್ಷೆಗಳ ಫಲಿತಾಂಶಗಳನ್ನು ಕೂಡಲೇ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿಗೆ ತರವುದು, ಕೆಪಿಎಸ್ಸಿ ಆಯೋಗವನ್ನು ಆಮೂಲಾಗ್ರ ಸುಧಾರಣೆ ಮಾಡಬೇಕು, ಬ್ಯಾಂಕ್, ರೈಲ್ವೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಸರ್ಕಾರ ಪರೀಕ್ಷಾರ್ಥಿಗಳಿಗೆ ಸೂಕ್ತ ನ್ಯಾಯ ದೊರಕಿಸಿ ಕೊಳ್ಳುತ್ತಿದ್ದಲ್ಲಿ ಮುಂಬರುವ ಜಿಲ್ಲಾ,ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳಲ್ಲಿ ಇದೇ ವಿದ್ಯಾರ್ಥಿಗಳನ್ನು ನಿಮ್ಮ ವಿರುದ್ಧ ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ಕೇವಲ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬಲಾಢ್ಯರ ಒತ್ತಡಕ್ಕೆ ಮಣಿದು ಜಾತಿಗಣತಿ ವರದಿಯನ್ನು ಮಂತ್ರಿಮಂಡಲ ಸಭೆಯಲ್ಲಿ ಅನುಮೋದನೆ ನೀಡದಿರುವ ಕ್ರಮವನ್ನು ಕಟುವಾಗಿ ಟೀಕಿಸಿದ ಮುಖ್ಯಮಂತ್ರಿ ಚಂದ್ರು ಕೂಡಲೇ ಜಾತಿಗಣತಿ ವರದಿಯನ್ನು ಅನುಮೋದಿಸಿ ಸದನದಲ್ಲಿ ಮಂಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಂತ ಕುಮಾರ್ ಹಾಗೂ ಅವರ ಎಲ್ಲ ಸ್ನೇಹಿತರುಗಳಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ ಚಂದ್ರ, ಅನಿಲ್ ನಾಚಪ್ಪ , ಉಮೇಶ್ ಗೌಡ ಸೇರಿ ಅನೇಕ ನಾಯಕರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.