ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ: ಉಗ್ರ ಕೃತ್ಯಕ್ಕೆ ಪ್ರೋತ್ಸಾಹ ನಿಲ್ಲಿಸಲು ತಾಕೀತು

ವಾಷಿಂಗ್ಟನ್​: ಜಮ್ಮು ಕಾಶ್ಮೀರದ ಪುಲ್ವಾಮದ ಆವಂತಿಪೋರ್​ನಲ್ಲಿ ಗುರುವಾರ ನಡೆದ ಭಯೋತ್ಪಾದಕರ ಆತ್ಮಾಹುತಿ ದಾಳಿಯನ್ನು ಖಂಡಿಸಿರುವ ಅಮೆರಿಕ, ಪಾಕಿಸ್ತಾನದ ವಿರುದ್ಧ ಗುಟುರು ಹಾಕಿದೆ. ಉಗ್ರ ಚಟುವಟಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ನಿಲ್ಲಿಸುವುಂತೆಯೂ, ಉಗ್ರರಿಗೆ ಪಾಕಿಸ್ತಾನದ ನೆಲ ಸುರಕ್ಷಿತ ಧಾಮವಾಗದಂತೆ ಎಚ್ಚರ ವಹಿಸುವಂತೆಯೂ ಅಮೆರಿಕ ಸ್ಪಷ್ಟ ಸಂದೇಶ ರವಾನಿಸಿದೆ.

ಘಟನೆ ನಂತರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕದ ವೈಟ್​ ಹೌಸ್​​ನ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್​, ” ಪಾಕಿಸ್ತಾನ ತನ್ನ ನೆಲವನ್ನು ಭಯೋತ್ಪಾದಕರ ಸುರಕ್ಷಿತ ಧಾಮ ಮಾಡಿರುವುದನ್ನು ಮತ್ತು ತನ್ನ ದೇಶದಲ್ಲಿ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕ ಆಗ್ರಹಿಸುತ್ತದೆ. ಅಶಾಂತಿ, ಸಂಘರ್ಷ, ಭಯ ಹುಟ್ಟಿಸುವುದೇ ಉಗ್ರರ ಮೂಲ ಉದ್ದೇಶ,” ಎಂದು ಅಮೆರಿಕ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈ ಘಟನೆ ಭಾರತ ಮತ್ತು ಅಮೆರಿಕವನ್ನು ಬೆಸೆದಿದೆ ಎಂದೂ ಅಮೆರಿಕ ಹೇಳಿಕೊಂಡಿದೆ.