ಐಮಂಗಲ: ಭದ್ರಾ ಮೇಲ್ದಂಡೆ ಯೋಜನೆ ಜಾರಿ ವೇಳೆ ಅನೇಕ ರೈತರು ಭೂಮಿ ನೀಡುವುದು ಅನಿವಾರ್ಯವಾಗಿದ್ದು, ಅನ್ನದಾತರ ತ್ಯಾಗಕ್ಕೆ ಅನ್ಯಾಯವಾಗದಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಹೋಬಳಿಯ ಬುರುಜಿನರೊಪ್ಪ ಗ್ರಾಮದ ಶ್ರೀರಕ್ಷಾ ಗಣಪತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾರುಕಟ್ಟೆ ದರದಂತೆ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.
ಬಯಲು ಸೀಮೆಯ ಮಹಾತ್ವಾಕಾಂಕ್ಷೆಯ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭಗೊಂಡಿದ್ದು, ಇದರಿಂದ ಜಿಲ್ಲೆಯ ಹಲವಾರು ಹಳ್ಳಿಗಳಿಗೆ ನೀರಾವರಿ, ಕುಡಿವ ನೀರಿಗೆ ಅನುಕೂಲವಾಗಲಿದೆ. ರೈತರು ಕಾಮಗಾರಿ ಸಗುಮವಾಗಿ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕೆ 63 ಎಕರೆ ಜಮೀನಿನ ಅಗತ್ಯವಿದೆ. ಇದಕ್ಕೆ ಭರಂಪುರ ಹಾಗೂ ಪಾಲವ್ವನಹಳ್ಳಿಯ 57 ಮಂದಿಯ ಜಮೀನುಗಳನ್ನು 2013ರ ಹೊಸ ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡು ನ್ಯಾಯಯುತ ಪರಿಹಾರ ನೀಡಲಾಗುವುದು ಎಂದರು.
ಕೆಲ ರೈತರ ಜಮೀನುಗಳ ದಾಖಲೆಗಳು ಅಪರಿಪೂರ್ಣವಾಗಿದ್ದು, ಅವುಗಳನ್ನು ಶೇ.90ರಷ್ಟು ಸರಿಪಡಿಸಿಕೊಂಡು ಅಗತ್ಯ ದಾಖಲೆ ಹಾಗೂ ನಕಾಶೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡಲಾಗುತ್ತದೆ. ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳು, ಕಟ್ಟಡ ಇದ್ದರೆ ಸಂಬಂಧಿಸಿದ ಇಲಾಖೆ ಮಾನದಂಡಗಳಿಗೆ ತಕ್ಕಂತೆ ದರ ನಿಗದಿಪಡಿಸಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಕಲ್ಲಹಟ್ಟಿ ಗ್ರಾಮದ ಇಸ್ಮಾಯಿಲ್ ಮಾತನಾಡಿ, 5 ಎಕರೆ ಜಮೀನಿನಲ್ಲಿ ನಾಲ್ಕು ಕುಟುಂಬಗಳ ಜಂಟಿಖಾತೆ ಇದೆ. ಇದು ಕಾಮಗಾರಿಗೆ ಹೋಗುವ ಕಾರಣ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಡಿ ಎಂದು ಮನವಿ ಮಾಡಿದರು.
ಸಹಾಯಕ ಕಾರ್ಯಪಾಲ ಅಭಿಯಂತರ ಟಿ.ಎನ್.ಸೋಮಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಭೂಸ್ವಾಧೀನಾಧಿಕಾರಿ ಕುಮಾರಸ್ವಾಮಿ, ಕಾರ್ಯಪಾಲ ಅಭಿಯಂತರ ಶ್ರೀಧರ್, ಬುರುಜಿನರೊಪ್ಪ ಗ್ರಾಪಂ ಅಧ್ಯಕ್ಷೆ ಟಿ.ಜಯಮ್ಮ, ಅಬ್ಬಿನಹೊಳೆ ಪಿಎಸ್‌ಐ ಚಂದ್ರಶೇಖರ್, ರೈತರಾದ ನೀಲಕಂಠಪ್ಪ, ಎಸ್.ಅಂಜನಪ್ಪ, ಚೌಡಪ್ಪ, ಬಸವರಾಜು, ತಿಪ್ಪೇಸ್ವಾಮಿ ಮತ್ತಿತರರಿದ್ದರು.