ಐಮಂಗಲ: ಕೆರೆಗಳ ಹೂಳು ತೆಗೆಸುವುದರಿಂದ ನೀರು ಸಂಗ್ರಹಗೊಂಡು ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.
ಜಲಾಮೃತ ಯೋಜನೆಯಡಿ ಗ್ರಾಮದ ಹೊರವಲಯದ ಶ್ರೀ ಕಲ್ಕುಂಟೇಶ್ವರಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದೊಡ್ಡಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಇದರಿಂದ ನೀರಿನ ಕೊರತೆ ಉಂಟಾಗುತ್ತದೆ. ನೀರಿನ ಸಂರಕ್ಷಣೆಗಾಗಿ ಮುಂದಾಲೋಚನೆಯಿಂದ ಪೂರ್ವಜರು ಕೆರೆ, ಗೋಕಟ್ಟೆ ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ಹೂಳು ತುಂಬಿ ನೀರು ನಿಲ್ಲದಂತೆ ಆಗಿವೆ. ನಾವು ಈಗಲೇ ಎಚ್ಚರ ವಹಿಸಿ ಜಲಮೂಲಗಳ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಹುಗ್ರಾಮ ಯೋಜನೆಯಡಿ ಹೋಬಳಿಯ ಹಲವು ಹಳ್ಳಿಗಳಿಗೆ ವಿವಿ ಸಾಗರದಿಂದ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಜಲಾಮೃತ ಯೋಜನೆಯ ನಿರ್ದೇಶಕ ಬಿ.ನಿಜಲಿಂಗಪ್ಪ ಮಾತನಾಡಿ, ಕೆರೆಗಳ ಅಭಿವೃದ್ಧಿ ದೃಷ್ಟಿಯಿಂದ 2019ರಲ್ಲಿ ಜಲಾಮೃತ ಯೋಜನೆ ಜಾರಿಗೆ ತಂದಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ 31 ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಗ್ರಾಪಂ ಉಪಾಧ್ಯಕ್ಷೆ ಕರಿಯಮ್ಮ, ಕೆ.ದ್ಯಾಮಣ್ಣ, ಕೋವೆರಹಟ್ಟಿ ಉಮಾಪತಿ, ಎನ್.ತಿಪ್ಪೀರಯ್ಯ, ಟಿ.ಎಲ್.ಬಸವರಾಜಪ್ಪ, ಡಿ.ಕೆ.ಶಿವಶಂಕರಪ್ಪ, ವೇದಮೂರ್ತಿ, ಜಿ.ಮಲ್ಲಯ್ಯ, ಎಸ್.ಪಿ.ಪಾತಪ್ಪ, ಪಿಡಿಒ ಚಿಕ್ಕಣ್ಣ, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ಸೌಮ್ಯಾ ಇದ್ದರು.