ಪರಿಸರ ಶುಚಿತ್ವ ನಮ್ಮೆಲ್ಲರ ಆದ್ಯ ಕರ್ತವ್ಯ

ಐಮಂಗಲ: ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟು ಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಗ್ರಾಮ ಪಂಚಾಯಿತಿ ಪಿಡಿಒ ಎಂ.ಶಶಿಕಲಾ ಹೇಳಿದರು.

ಐಮಂಗಲದಲ್ಲಿ ಗ್ರಾಪಂ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ವಿ.ಎಸ್.ಸಜ್ಜನ್ ಮಾತನಾಡಿ, ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಇದರಿಂದ ರೋಗ ಮುಕ್ತ ಜೀವನ ನಡೆಸಬಹುದು ಎಂದರು.

ಉಪನ್ಯಾಸಕರಾದ ಎಂ.ರಮೇಶ್, ಪೆನ್ನಯ್ಯ, ರವಿಕುಮಾರ್, ಗ್ರಾಪಂ ಸಿಬ್ಬಂದಿಗಳಾದ ಸುಧಾ, ಸ್ಮಿತಾ, ಜಗದೀಶ್, ತಿಪ್ಪೇಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ರಾಧಾಕೃಷ್ಣ, ಟಿ.ಎಲ್.ಬಸವರಾಜಪ್ಪ ಇತರರಿದ್ದರು.