ವೈದ್ಯರ ಮೇಲಿನ ಹಲ್ಲೆಗೆ ಖಂಡಿಸಿ ಚಿಕ್ಕಮಗಲೂರಿನ ಖಾಸಗಿ ಆಸ್ಪತ್ರೆಗಳು ಸ್ತಬ್ಧ

ಚಿಕ್ಕಮಗಳೂರು: ಕೊಲ್ಕತ್ತಾದಲ್ಲಾದ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನೀಡಿದ ಕರೆಯ ಮೇರೆಗೆ ಸೋಮವಾರ ನಗರದಲ್ಲಿ ಖಾಸಗಿ ವೈದ್ಯರು ಆಸ್ಪತ್ರೆ, ಕ್ಲಿನಿಕ್​ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ಜಿಲ್ಲಾದ್ಯಂತ ಖಾಸಗಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಸಮಸ್ಯೆ ಅನುಭವಿಸಬೇಕಾಯಿತು.

ಸೋಮವಾರ ಬೆಳಗ್ಗೆ ರೋಗಿಗಳು ಖಾಸಗಿ ಆಸ್ಪತ್ರೆ ಬಳಿ ಕಾದು ಕುಳಿತಿದ್ದರು. ನಂತರ ಮುಷ್ಕರದ ಮಾಹಿತಿ ಗೊತ್ತಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿದರು. ಸೋಮವಾರವಾಗಿದ್ದರಿಂದ ಸರ್ಕಾರಿ ಆಸ್ಪತ್ರೆಯ ಕೌಂಟರ್​ಗಳ ಬಳಿ ಜನರ ನೂಕುನುಗ್ಗಲು ಹೆಚ್ಚಾಗಿತ್ತು.

ಅಪಘಾತದಲ್ಲಿ ಗಾಯಗೊಂಡವರು, ಹೊಟ್ಟೆನೋವು, ಎದೆನೋವು ಮತ್ತಿತರೆ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಆಸ್ಪತ್ರೆ ಸಿಬ್ಬಂದಿ ಸಹ ಸಮಾಧಾನದಿಂದ ಸ್ಪಂದಿಸುತ್ತಿದ್ದರು.

ನಗರದ ನರ್ಸಿಂಗ್ ಹೋಂಗಳ ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿದ್ದರೂ ಮಾನವೀಯ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆ ನೀಡಲು ಸಿದ್ಧವಾಗಿದ್ದವು. ಪ್ರತಿಭಟನಾ ನಿರತ ವೈದ್ಯರು ಗಾಂಧಿ ಪ್ರತಿಮೆ ಬಳಿ ವಿವಿಧ ಘೊಷಣೆ ಕೂಗಿ ಘಟನೆಯನ್ನು ಖಂಡಿಸಿದರು. ಕೈಗೆ ಕಪ್ಪುಪಟ್ಟಿ ಧರಿಸಿ ಗಾಂಧಿ ಪಾರ್ಕ್​ನಿಂದ ವಿವಿಧ ಘೊಷಣಾ ಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು.

ಮಹಿಳೆಗೆ ತುರ್ತು ಚಿಕಿತ್ಸೆ: ತೀವ್ರ ಅನಾರೋಗ್ಯಕ್ಕೆ ಒಳಗಾಗಿ ನಿತ್ರಾಣಗೊಂಡಿದ್ದ ಚಿಕ್ಕಮಗಳೂರಿನ ಮಹಿಳೆಯೊಬ್ಬರನ್ನು ಕುಟುಂಬದವರು ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಮುಷ್ಕರದ ವಿಚಾರ ಗೊತ್ತಾಗಿ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಈ ಸಂದರ್ಭ ವಾಹನವನ್ನು ಹಾರ್ನ್ ಮಾಡಿಕೊಂಡೇ ಕರೆದೊಯ್ದರು. ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ಸಂದರ್ಭ ಸುತ್ತಮುತ್ತ ವಾಹನಗಳು ನಿಂತಿದ್ದವು. ಅದರ ನಡುವೆಯೇ ಆಸ್ಪತ್ರೆ ಸಿಬ್ಬಂದಿಯನ್ನು ಕರೆತಂದು ವ್ಹೀಲ್​ಚೇರ್​ನಲ್ಲಿ ರೋಗಿಯನ್ನು ಒಳಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

Leave a Reply

Your email address will not be published. Required fields are marked *