ಬೆಂಗಳೂರು: ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ವಂಚಕ ಮನ್ಸೂರ್ ಖಾನ್ ತಾನು ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ರೋಷನ್ ಬೇಗ್ ಅವರ ಹೆಸರನ್ನು ಬಹಿರಂಗಪಡಿಸಿದ್ದರು. ಅಲ್ಲದೆ, ಐಎಂಎಯ ಅನೇಕ ಕಾರ್ಯಕ್ರಮಗಳಲ್ಲಿ ಮನ್ಸೂರ್ ಜತೆ ಬೇಗ್ ಕಾಣಿಸಿಕೊಂಡಿದ್ದರು.
ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೀಡಿದ್ದ ಮೊದಲು ಮತ್ತು ಎರಡನೇ ನೋಟಿಸ್ಗೆ ಶಾಸಕ ರೋಷನ್ ಬೇಗ್ ಸ್ಪಂದಿಸಿರಲಿಲ್ಲ. ತನ್ನ ಹುಟ್ಟುಹಬ್ಬ, ಹಜ್ ಯಾತ್ರೆ ಹಾಗೂ ವಿಧಾನಸಭೆ ಬೆಳವಣಿಗೆ ಕಾರಣ ನೀಡಿ ಕಾಲಾವಕಾಶ ಕೇಳಿದ್ದರು. ಆಪ್ತ ಸಲಹೆಗಾರನನ್ನು ಎಸ್ಐಟಿ ಕಚೇರಿಗೆ ಕಳುಹಿಸಿ ಸಮಯ ಕೇಳಿದ್ದರು. ಜುಲೈ 25 ರಂದು ವಿಚಾರಣೆಗೆ ಹಾಜರಾಗುತ್ತಾರೆ ಎಂದು ಹೇಳಲಾಗಿತ್ತು.
ತನ್ನ ಹೂಡಿಕೆದಾರರಿಗೆ ಬಹುಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್ ಖಾನ್ ಸೋಮವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ನನಗೆ ಭಾರತದ ಸಂವಿಧಾನದ ಮೇಲೆ ನಂಬಿಕೆ ಇದೆ. ನನ್ನನ್ನು ನಂಬಿರುವ ಜನರಿಗೆ ನಾನು ಮೋಸ ಮಾಡುವುದಿಲ್ಲ. ನನ್ನ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಹಣವಾಗಿ ಪರಿವರ್ತಿಸಿ ಎಲ್ಲರ ಹಣವನ್ನು ವಾಪಸು ನೀಡುವ ಸಲುವಾಗಿ 24 ಗಂಟೆಗಳ ಒಳಗೆ ಭಾರತಕ್ಕೆ ಬರುತ್ತೇನೆ. ನನಗೆ ರಕ್ಷಣೆ ಒದಗಿಸಿದರೆ ನಾನು ಭಾರತಕ್ಕೆ ಮರಳುತ್ತೇನೆ ಎಂದು ಹೇಳಿದ್ದರು.