ಅರುಣ್​ ಜೇಟ್ಲಿ ಅನಾರೋಗ್ಯ ನೋವು ತಂದಿದೆ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ

ನವದೆಹಲಿ: ಅನಾರೋಗ್ಯಕ್ಕೀಡಾಗಿರುವ ಅರುಣ್​ ಜೇಟ್ಲಿ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ, ಹಿರಿಯ ಕಾಂಗ್ರೆಸ್​ ಮುಖಂಡ ಸಲ್ಮಾನ್​ ಖುರ್ಷಿದ್​, ಆರ್​ಜಿಡಿ ಅಧ್ಯಕ್ಷ ಲಾಲೂಪ್ರಸಾದ್​ ಯಾದವ್​ ಮತ್ತಿತರರು ಟ್ವೀಟ್​ ಮಾಡಿದ್ದಾರೆ.

ಹಣಕಾಸು ಸಚಿವ ಅರುಣ್​ ಜೇಟ್ಲಿ ವೈದ್ಯಕೀಯ ತಪಾಸಣೆಗಾಗಿ ಭಾನುವಾರವೇ ಯುಎಸ್​ಗೆ ತೆರಳಿದ್ದಾರೆ. ಈಗ ಅವರು ಕ್ಯಾನ್ಸರ್​ಗೆ ತುತ್ತಾಗಿದ್ದಾರೆಂದು ಮೂಲಗಳು ತಿಳಿಸಿವೆ. ಈ ಮಧ್ಯೆ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದು, ಅರುಣ್​ ಜೇಟ್ಲಿಯವರ ಆರೋಗ್ಯ ಸರಿಯಿಲ್ಲವೆಂದು ಕೇಳಿ ಮನಸಿಗೆ ಬೇಸರವಾಗಿದೆ. ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಅವರೊಂದಿಗೆ ದಿನನಿತ್ಯ ಸಣ್ಣಪುಟ್ಟ ಜಗಳವಾಡುತ್ತಿದ್ದೆ. ಅವರು ಶೀಘ್ರ ಗುಣಮುಖರಾಗಲೆಂದು ನಾನು ನನ್ನ ಪಕ್ಷದ ಪರವಾಗಿ ಪ್ರೀತಿಯಿಂದ ಹಾರೈಸುತ್ತೇನೆ. ನಿಮ್ಮ ಈ ಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್​, ಕಾಂಗ್ರೆಸ್​ ಮುಖಂಡ ಸಲ್ಮಾನ್​ ಖುರ್ಷಿದ್​ ಸೇರಿ ಹಲವು ಬಿಜೆಪಿ ನಾಯಕರು, ಪ್ರತಿಪಕ್ಷಗಳ ಮುಖಂಡರು ಅರುಣ್​ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.