ಹನ್ನೊಂದು ವರ್ಷಗಳ ಬಳಿಕ ಶ್ರೀಶಾಂತ್​​ಗೆ ಕ್ಷಮೆಯಾಚಿಸಿದ ಹರ್ಭಜನ್​ ಸಿಂಗ್​

ನವದೆಹಲಿ: ಹನ್ನೊಂದು ವರ್ಷಗಳ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಅವರು ಮಾಜಿ ವೇಗಿ ಶ್ರೀಶಾಂತ್​ ಅವರ ಮೇಲೆ ಮಾಡಿದ್ದ ಕಪಾಳ ಮೋಕ್ಷಕ್ಕೆ ಕೊನೆಗೂ ಕ್ಷಮೆಯಾಚಿಸಿದ್ದಾರೆ.

2008ರ ಐಪಿಲ್​ನ ಮೊದಲನೇ ಆವೃತ್ತಿಯಲ್ಲಿ ಮಾಜಿ ವೇಗಿ ಶ್ರೀಶಾಂತ್​ ಪಂಜಾಬ್​ ತಂಡವನ್ನು ಪ್ರತಿನಿಧಿಸಿದ್ದರು. ಮುಂಬೈ ಇಂಡಿಯನ್ಸ್​ ಪರ ಆಡುತ್ತಿದ್ದ ಹರ್ಭಜನ್ ಸಿಂಗ್​ ಅವರನ್ನು ಔಟ್​ ಮಾಡಿದ ಖುಷಿಯಲ್ಲಿ ಅಗ್ರೆಸಿವ್​ ಆಗಿ ವರ್ತಿಸಿದ್ದನ್ನು ಕಂಡು ಹರ್ಭಜನ್​, ಶ್ರೀಶಾಂತ್​ ಕಪಾಳಕ್ಕೆ ಬಾರಿಸಿದ್ದರು.

ಈ ವಿವಾದದ ಸುಳಿಗೆ ಸಿಲುಕಿದ ಹರ್ಭಜನ್ ಅವರನ್ನು​ ಮುಂದಿನ 11 ಟಿ20 ಪಂದ್ಯಗಳಿಗೆ ನಿಷೇಧಿಸಲಾಗಿತ್ತು. ಇದಾದ 11 ವರ್ಷಗಳ ಬಳಿಕ ಹರ್ಭಜನ್​ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣದಲ್ಲಿ ನನ್ನ ಮತ್ತು ಶ್ರೀಶಾಂತ್​ ನಡುವೆ ಏನು ನಡೆಯಿತು ಆ ಘಟನೆಯನ್ನು ಇಂದಿಗೂ ಜನರು ಮಾತನಾಡುತ್ತಿದ್ದಾರೆ. ಒಂದು ವೇಳೆ ನನ್ನ ಜೀವನದ ಹಿಂದಿನ ಹಾದಿಗೆ ಮರಳಿ ಏನಾದರೂ ಸರಿಪಡಿಸಿಕೊಳ್ಳಬೇಕೆಂದರೆ, ನಾನು ಆ ಘಟನೆಯನ್ನು ಸರಿಪಡಿಸಿಕೊಳ್ಳುತ್ತೇನೆ. ನಾನು ಅದನ್ನು ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಅದು ನನ್ನಿಂದಾದ ಒಂದು ಸಣ್ಣ ತಪ್ಪು. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಶ್ರೀಶಾಂತ್​ ಒಬ್ಬ ಉನ್ನತ ವ್ಯಕ್ತಿಯಾಗಿದ್ದರು. ಅವರ ಆಟದಲ್ಲಿ ಸಾಕಷ್ಟು ಕೌಶಲಗಳಿತ್ತು. ಶ್ರೀಶಾಂತ್​, ಅವರ ಪತ್ನಿ ಹಾಗೂ ಮಕ್ಕಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಜನರು ಏನು ಹೇಳುತ್ತಾರೆ ಅನ್ನೋದು ವಿಷಯವೇ ಅಲ್ಲ. ನಾನು ಇಂದಿಗೂ ನಿನ್ನ ಸಹೋದರ ಎಂದು ಘಟನೆ ಕುರಿತಾಗಿ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)