ನನಗೊಂದು ಅವಕಾಶ ಕೊಡಿ: ಮೈಸೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಿಖಿಲ್​ ಕುಮಾರಸ್ವಾಮಿ

ಮೈಸೂರು: ನಮ್ಮ ತಂದೆಯನ್ನು ನೀವು ಬೆಳೆಸಿದ್ದೀರಿ. ಅವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ನನಗೂ ಒಂದು ಅವಕಾಶ ಕೊಡಿ. ನಾನು ತಮ್ಮ ಸೇವೆ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಮೈಸೂರಿನ ಮೂಲಕ ರಾಜಕೀಯ ಪ್ರವೇಶಿಸುವ ಇಂಗಿತವನ್ನು ಅವರು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ.

ಇಂದು ಮೈಸೂರಿನಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ನನ್ನ ತಂದೆಯ ರೀತಿಯಲ್ಲೇ ನಾನು ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ. ನನಗೂ ಒಂದು ಅವಕಾಶ ಮಾಡಿಕೊಡಿ,” ಎಂದಷ್ಟೇ ಹೇಳುವ ಮೂಲಕ ಮೈಸೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಮುನ್ಸೂಚನೆ ನೀಡಿದರು.
ನಂತರ, “ನಾನು ರಾಜಕೀಯದಲ್ಲಿ ಈಗ ಕಣ್ಣು ಬಿಡುತ್ತಿದ್ದೇನೆ. ನಾನೇನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ,” ಎಂದರು.

ಇದಕ್ಕೂ ಮೊದಲು ಮಾತನಾಡಿದ್ದ ಸಚಿವ ಜಿ.ಟಿ ದೇವೇಗೌಡ, ” ನಾವೆಲ್ಲ ಒತ್ತಾಯ ಮಾಡಿದ್ದೇವೆ. ದೊಡ್ಡವರು (ದೇವೇಗೌಡರು) ಮೈಸೂರಿಗೆ ಬರಬೇಕು. ದೊಡ್ಡವರು ಬರಲು ಸಾಧ್ಯವಾಗದೇ ಇದ್ದರೆ ನಿಖಿಲ್ ಕುಮಾರಸ್ವಾಮಿ ಅವರನ್ನಾದರೂ ಕಳುಹಿಸಿಕೊಡಬೇಕು. ನಾವು ಗೆಲ್ಲಿಸಿಕೊಡುತ್ತೇವೆ,” ಎಂದು ಹೇಳಿದರು. ನಿಖಿಲ್​ ಕುಮಾರ್ ಕೂಡ ತಮ್ಮ ಭಾಷಣದಲ್ಲಿ ಜಿ.ಟಿ ದೇವೇಗೌಡರ ಪ್ರಸ್ತಾಪವನ್ನು ಉಲ್ಲೇಖಿಸಿಯೇ ಅವಕಾಶ ಯಾಚಿಸಿದರು.

ನಿಖಿಲ್ ಅವರನ್ನು ಮಂಡ್ಯದಿಂದ ಲೋಕಸಭೆ ಕಣಕ್ಕಿಳಿಸಲು ಜೆಡಿಎಸ್​ ಯೋಜನೆ ರೂಪಿಸುತ್ತಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಅಲ್ಲಿ ಸುಮಲತಾ ಅವರು ಈ ಬಾರಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಿಖಿಲ್​ ಮೈಸೂರಿಗೆ ಬರುವ ಸಾಧ್ಯತೆಗಳಿವೆ ಎಂದು ಅವರ ಈ ಮಾತುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.