ನೊಬೆಲ್​ಗೆ ನಾನು ಅರ್ಹನಲ್ಲ: ಭಾರತ, ಪಾಕಿಸ್ತಾನದಲ್ಲಿ ಶಾಂತಿಗೆ ದಾರಿ ಮಾಡಿಕೊಡುವರಿಗೆ ಪ್ರಶಸ್ತಿ ಸಿಗಲಿ ಎಂದ ಇಮ್ರಾನ್​

ಇಸ್ಲಾಮಾಬಾದ್​: ನೊಬೆಲ್​ ಶಾಂತಿ ಪ್ರಶಸ್ತಿಯಂಥ ದೊಡ್ಡ ಪುರಸ್ಕಾರ ಪಡೆಯುವಷ್ಟು ನಾನು ಅರ್ಹನಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, “ನೊಬೆಲ್​ ಶಾಂತಿ ಪ್ರಶಸ್ತಿಗೆ ನಾನು ಅರ್ಹನಲ್ಲ. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರು. ಭಾರತ-ಪಾಕಿಸ್ತಾನದ ಉಪಖಂಡದಲ್ಲಿ ಶಾಂತಿ ಮತ್ತು ಮಾನವ ಅಭಿವೃದ್ಧಿಗೆ ದಾರಿ ಮಾಡಿಕೊಡುವವರಿಗೆ ಈ ಪ್ರಶಸ್ತಿ ಸಿಗಲಿ,” ಎಂದು ಅವರು ಆಶಿಸಿದ್ದಾರೆ.

ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಭಾರತೀಯ ವಾಯುಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ದಮಾನ್​ ಅವರನ್ನು ಶಾಂತಿಯ ನೆಲೆಯಲ್ಲಿ ಬಿಡುಗಡೆ ಮಾಡಿದ್ದಾಗಿ ಹೇಳಿದ್ದ ಇಮ್ರಾನ್​ ಖಾನ್​ ಅವರಿಗೆ ನೊಬೆಲ್​ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಪಾಕಿಸ್ತಾನದ ಸಂಸತ್​ ನಿರ್ಣಯ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಮ್ರಾನ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಮ್ರಾನ್​ ಖಾನ್ ಅವರ ಈ ಟ್ವೀಟ್​ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.