ನಾನು ಇಂದಿರಾ ಗಾಂಧಿ ಅಪರಾವತಾರ ಅಲ್ಲದಿದ್ದರೂ ಅವರಂತೆ ಕೆಲಸ ಮಾಡುವೆ: ಪ್ರಿಯಾಂಕ ಗಾಂಧಿ

ಕಾನ್ಪುರ: ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜತೆ ತಮ್ಮನ್ನು ತಾವು ಹೋಲಿಸಿಕೊಳ್ಳುವುದಿಲ್ಲ. ಆದರೆ ರಾಷ್ಟ್ರ ಸೇವೆಯ ವಿಚಾರದಲ್ಲಿ ಅವರನ್ನೇ ಅನುಸರಿಸುತ್ತೇನೆ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದ ಕಾಂಗ್ರೆಸ್‌ ಅಭ್ಯರ್ಥಿ ಶಿವಪ್ರಕಾಶ್‌ ಜೈಸ್ವಾಲ್‌ ಪರ ನಡೆದ ಕಾರ್ಯಕರ್ತರ ಸಭೆಯಲ್ಲಿ ತಮ್ಮನ್ನು ತಮ್ಮ ಅಜ್ಜಿಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ ಗಾಂಧಿ, ಇಂದಿರಾಜಿ ಅವರ ಮುಂದೆ ನಾನು ಏನೂ ಅಲ್ಲ. ಆದರೆ ಅವರ ಹೃದಯದಲ್ಲಿದ್ದ ಸೇವೆಯ ಆಸೆಯು ನನ್ನ ಮತ್ತು ಸೋದರನ (ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ) ಹೃದಯದಲ್ಲಿಯೂ ಇದೆ. ಇದರಿಂದ ನಮ್ಮನ್ನು ಯಾರು ಪ್ರತ್ಯೇಕಿಸಲಾರರು. ನೀವು ನಮಗೆ ಅವಕಾಶ ನೀಡುತ್ತೀರೋ, ಇಲ್ಲವೋ ಆದರೆ ನಿಮ್ಮ ಸೇವೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದರು.

ದೇಶದ ಹಿತಕ್ಕಿಂತಲೂ ಬಿಜೆಪಿ ಸರ್ಕಾರಕ್ಕೆ ಕೇವಲ ಅವರ ಏಳಿಗೆ ಕುರಿತಷ್ಟೇ ಕಾಳಜಿ ಹೊಂದಿದ್ದಾರೆ. ಸರ್ಕಾರದಲ್ಲಿ ಎರಡು ವಿಧಗಳಿವೆ… ಒಂದು ಜನಗಳಿಗಾಗಿ ಕೆಲಸ ಮಾಡುವುದು ಮತ್ತು ಕೇವಲ ತಮ್ಮ ಏಳಿಗೆಯನ್ನಷ್ಟೇ ಬಯಸುವುದು. ಬಿಜೆಪಿ ಸರ್ಕಾರವು ಕೇವಲ ಪ್ರಚಾರ ಮತ್ತು ತೋರ್ಪಡಿಸುತ್ತಿದೆ ಎಂದು ದೂರಿದರು.

ನಿವೃತ್ತ ಯೋಧರಿಗೆ ನೀಡುವ ಏಕ ಶ್ರೇಣಿ – ಏಕ ಪಿಂಚಣಿ (OROP) ಪ್ರಯೋಜನಗಳನ್ನು ವಿಸ್ತರಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿದ ಅವರು, OROP ನಿಜವಾಗಿಯೂ ಸಶಸ್ತ್ರ ಪಡೆಗಳಿಗೆ ಉಡುಗೊರೆಯಾಗಿದೆಯಾ ಅಥವಾ ಪರವಾಗಿದೆಯಾ ಇಲ್ಲವೇ ಅದು ಅವರ ಹಕ್ಕಾಗಿದೆಯಾ? ಸಶಸ್ತ್ರ ಪಡೆಗಳ ಹಕ್ಕನ್ನು ಸರ್ಕಾರದ ಪರವಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಮನಸ್ಥಿತಿ ಏನು ಮತ್ತು ಅದನ್ನು ಯಾರು ಬದಲಿಸುತ್ತಾರೆ ಎಂದು ನೆರೆದಿದ್ದ ಗುಂಪನ್ನು ಪ್ರಶ್ನಿಸಿದರು.

ಕಾನ್ಪುರದಲ್ಲಿ ಬೃಹತ್​ ರೋಡ್​ ಶೋ ನಡೆಸಿ ಮಾತನಾಡಿ, ಆಡಳಿತಾರೂಢ ಬಿಜೆಪಿ ಅಭಿವೃದ್ಧಿ ಕುರಿತು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಕಾನ್ಪುರವನ್ನು ಸ್ಮಾರ್ಟ್‌ ಸಿಟಿ ಮಾಡುವುದಾಗಿ ಹೇಳಿದ್ದರು. ಆದರೆ ಅದೇನು ಆಗಿಲ್ಲ. ಯುವಕರು ನಿರುದ್ಯೋಗಿಗಳಾಗಿದ್ದಾರೆ, ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *