ಟಿಕೆಟ್ ವಂಚಿತಳಾಗಿದ್ದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಮ್ಮ ಕೈತಪ್ಪಿದ್ದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ‘ಯುದ್ಧ’ದ ಸಮಯದಲ್ಲಿ ಉತ್ತರ ಕೇಳುವುದಕ್ಕಿಂತಲೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಮುಖ್ಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಈ ಮೊದಲು ಒಂದಿಬ್ಬರ ಬಳಿ ಈ ಕುರಿತು ಪ್ರಶ್ನಿಸಿದ್ದು ನಿಜ. ವರಿಷ್ಠರು ಬೇರೆ ಬೇರೆ ಚಿಂತನೆ ನಡೆಸಿ, ಭವಿಷ್ಯದ ದೃಷ್ಟಿಯನ್ನೂ ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಿರುತ್ತಾರೆ. ಚುನಾವಣೆ ನಂತರ ಅದಕ್ಕೆ ಉತ್ತರ ಸಿಕ್ಕರೂ ಸಿಗಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರಪತ್ರದ ಹಿಂದೆ ಷಡ್ಯಂತ್ರ: ನಾನು ಬಿಜೆಪಿ ಪರಿವಾರದಿಂದ ಬಂದವಳು. ನನ್ನ ಪತಿ 6 ಬಾರಿ ಬಿಜೆಪಿ ಸಂಸದರಾಗಿ, ಕಡೆ ಉಸಿರಿರುವವರೆಗೆ ಪಕ್ಷದ ಪರ ಕೆಲಸ ಮಾಡಿದ್ದಾರೆ. ಇದೀಗ ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ. ಯಾವುದೇ ಕಾರಣಕ್ಕೆ ನಾನು ಇಂತಹ ಮಾತನ್ನು ಆಡುವುದಿಲ್ಲ. ನೋಟಾಕ್ಕೆ ಬೆಂಗಳೂರು ದಕ್ಷಿಣದಲ್ಲಷ್ಟೇ ಅಲ್ಲ, ಯಾವುದೇ ಕ್ಷೇತ್ರದಲ್ಲೂ ಮತ ನೀಡಬಾರದು ಎಂದೇ ಹೇಳುತ್ತೇನೆ. ಪೊಲೀಸ್ ಮತ್ತು ಸೈಬರ್ ಠಾಣೆಗೂ ದೂರು ನೀಡಲಾಗಿದ್ದು, ನನ್ನ ಹೆಸರು ದುರುಪಯೋಗ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು.

ಟಿಕೆಟ್ ನೀಡಿಕೆ ಬಗ್ಗೆ ಸಂತೋಷ್ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರ ಜತೆ ರ್ಚಚಿಸಿದ ನಂತರ ತಿಳಿಸುತ್ತೇನೆ ಎಂದು ತೇಜಸ್ವಿನಿ ಹೇಳಿದರು.