Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ನಾನು ರೈತರ ಪರ, ಇನ್ನೆರಡು ದಿನಗಳಲ್ಲಿ ಬಾಕಿ ಹಣ ಬಿಡುಗಡೆ ಮಾಡಿ: ಕಾರ್ಖಾನೆ ಮಾಲೀಕರಿಗೆ ಸಿಎಂ ಗಡುವು

Tuesday, 20.11.2018, 6:48 PM       No Comments

ಬೆಂಗಳೂರು: ಕಬ್ಬು ಪೂರೈಕೆ ಮಾಡಿರುವ ರೈತರಿಗೆ ನೀಡದೇ ಉಳಿಸಿಕೊಂಡಿರುವ ಬಾಕಿ ಹಣ ಬಿಡುಗಡೆ ಮಾಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸಿಎಂ ಎಚ್​.ಡಿ ಕುಮಾರಸ್ವಾಮಿ ಖಡಕ್​ ಸೂಚನೆ ನೀಡಿದ್ದಾರೆ. ಅಲ್ಲದೆ, ನಾನು ರೈತರ ಪರ ಎಂಬುದನ್ನು ಕಾರ್ಖಾನೆಗಳ ಮಾಲೀಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡುವಂತೆ ರೈತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಇಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆಗೆ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಒಂದೆಡೆ, ಹಣ ಬಿಡುಗಡೆ ಮಾಡಿಸುವುದಾಗಿ ರೈತರಿಗೆ ಅಭಯ ನೀಡಿದ್ದರೆ, ಇನ್ನೊಂದೆಡೆ ಬಾಕಿ ಹಣ ಬಿಡುಗಡೆ ಮಾಡಲು ಮಾಲೀಕರಿಗೆ ಎರಡು ದಿನಗಳ ಗಡುವು ವಿಧಿಸಿದರು.

ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗಿನ ಸಭೆಯಲ್ಲಿ ಆಗಿದ್ದಿಷ್ಟು

“ಸರ್ಕಾರದ ಗಮನಕ್ಕೆ ತಾರದೆ ನೀವೇ ರೈತರಿಗೆ ಹೆಚ್ಚಿನ ಬೆಲೆ ಘೋಷಣೆ ಮಾಡಿಕೊಂಡಿದ್ದೀರಿ. ಈಗ ಆ ಹಣವನ್ನು ರೈತರಿಗೆ ಕೊಡಲೇಬೇಕು. ಇನ್ನು ನಿಮ್ಮ ಯಾವುದೇ ಕಥೆ ಕೇಳಿಕೊಂಡು ಕೂರಲು ಸಾಧ್ಯವಿಲ್ಲ. ಹೊಸ ಕಬ್ಬು ಅರೆಯುವ ಮುನ್ನ ಹಳೆ ಬಾಕಿಯನ್ನು ಚುಕ್ತಾ ಮಾಡಬೇಕು,” ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸಿಎಂ ಎಚ್ಡಿಕೆ ಕಟ್ಟಪ್ಪಣೆ ವಿಧಿಸಿದರು.

ಸಿಎಂ ಎಚ್ಚರಿಕೆಗೆ ಬೆಚ್ಚಿಬಿದ್ದ ಕಾರ್ಖಾನೆ ಮಾಲಿಕರು, “ನಾವು ಕಾರ್ಖಾನೆ ಮಾಲೀಕರಲ್ಲ, ಅವರ ಪರವಾಗಿ ಬಂದಿರುವ ಪ್ರತಿನಿಧಿಗಳು. ಸಭೆಯ ಅಂಶಗಳನ್ನು ಮಾಲೀಕರ ಗಮನಕ್ಕೆ ತರುತ್ತೇವೆ,”ಎಂದು ಪ್ರತಿನಿಧಿಗಳು ಸಿಎಂಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ , “ಎರಡು ದಿನಗಳ ಒಳಗೆ ಮಾಲೀಕರು ನನ್ನನ್ನು ಭೇಟಿ ಮಾಡಬೇಕು. ತಕ್ಷಣವೇ ಸಮಸ್ಯೆ ಪರಿಹಾರ ಆಗಬೇಕು. ಇನ್ನೆರಡು ದಿನದಲ್ಲಿ ವಿಧಾನಸೌಧಕ್ಕೆ ಬಂದು ಹಳೇ ಬಾಕಿ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಬೇಕು. ನಾನು ರೈತರ ಪರ ಇರುವವನು,” ಎಂದು ಸ್ಪಷ್ಟವಾಗಿ ತಿಳಿಸಿದರು.

ಕಾರ್ಖಾನೆಗಳಿಗೆ ಮೂಗುದಾರ ಹಾಕಲು ಕಾನೂನು ತರುವರೇ ಮುಖ್ಯಮಂತ್ರಿ?

ಕಬ್ಬಿನ ಬಾಕಿ ಉಳಿಸಿಕೊಂಡು ರೈತರ ಆಕ್ರೋಶಕ್ಕೆ ಕಾರಣವಾಗುವ, ಈ ಮೂಲಕ ದೊಡ್ಡ ಮಟ್ಟದ ಸಮಸ್ಯೆಗಳನ್ನು ಸೃಷ್ಟಿಸುವ ಸಕ್ಕರೆ ಕಾರ್ಖಾನೆಗಳ ನಿಯಂತ್ರಣಕ್ಕಾಗಿ ಹೊಸ ಕಾನೂನು ಜಾರಿಗೆ ತರಲು ಸಿಎಂ ಎಚ್ಡಿಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಳಗಾವಿ ಅಧಿವೇಶನದಲ್ಲೇ ಈ ಕಾನೂನು ಜಾರಿಗೆ ಬರುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಕನ್ನಡದಲ್ಲಿ ಮಾಹಿತಿ ಕೊಡಿ; ಬೇರೆ ರಾಜ್ಯದವರ ಪಾರು ಪತ್ಯ ಬೇಡ

ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಇಂಗ್ಲಿಷ್​ನಲ್ಲಿ ಮಾಹಿತಿ ನೀಡಲು ಮುಂದಾದವರನ್ನು ಸಿಎಂ ತರಾಟೆಗೆ ತೆಗೆದುಕೊಂಡರು. ಮಾಲೀಕರ ಸಂಘದ ಅಧ್ಯಕ್ಷ ರೆಡ್ಡಿ ಅವರು ಇಂಗ್ಲಿಷ್​ನಲ್ಲಿ ಮಾಹಿತಿ ನೀಡಲು ಬಂದರು. ಆಗ, “ಹೊರ ರಾಜ್ಯದವರು ಬಂದು ನಮ್ಮ ಸಮಸ್ಯೆ ಹೇಳಬೇಕಿಲ್ಲ. ನಮ್ಮ ರಾಜ್ಯದ ರೈತರ ಸಮಸ್ಯೆ ಬಗ್ಗೆ ನೀವು ಮಾತನಾಡುವುದು ಬೇಡ. ನಮ್ಮ ರೈತರ ಸಮಸ್ಯೆ ನಮ್ಮ ರಾಜ್ಯದವರಿಗೆ ಮಾತ್ರ ತಿಳಿದಿರುತ್ತದೆ. ಕನ್ನಡದವರೇ ನಮ್ಮ ಸಂಘಟನೆಯ ಅಧ್ಯಕ್ಷರಾಗಲಿ,” ಎಂದು ಸಿಎಂ ತಿಳಿಸಿದರು. ಆಗ ಸಭೆಯಲ್ಲಿದ್ದ ರೈತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ರೈತರ ಹಿತ ಕಾಯುವೆ: ಬೆಳೆಗಾರರ ಸಭೆಯಲ್ಲಿ ಸಿಎಂ

ಬಾಕಿ ಪಾವತಿಸದಿದ್ದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಬ್ಬು ಬೆಳೆಗಾರರಿಗೆ ಅಭಯ ನೀಡಿದ್ದಾರೆ. FRP (Fair and Remunerative Price) ದರದಂತೆ ರೈತರಿಗೆ ಹಣ ನೀಡದೇ ಹೋದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವೆ. FRP ಪ್ರಕಾರ ಪ್ರತಿ ಟನ್ ಕಬ್ಬಿಗೆ 2,750 ರೂ. ಕೊಡಬೇಕು ಎಂದು ತಿಳಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

Back To Top