ನವದೆಹಲಿ: ಆರ್ಟಿಕಲ್ 370 ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆಯತ್ತ ದಾಪುಗಾಲು ಇಡುತ್ತಿದೆ. ಇತ್ತ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ (ಪಿಡಿಪಿ) ಅಭ್ಯರ್ಥಿ ಇಲ್ತಿಜಾ ಮುಫ್ತಿ ( Iltija Mufti ) ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
ಶ್ರೀಗುಫ್ವಾರಾ-ಬಿಜ್ಬೆಹರಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಇಲ್ತಿಜಾ ಮುಫ್ತಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಈಗಾಗಲೇ ಅರ್ಧದಷ್ಟು ಮತಎಣಿಕೆ ಕಾರ್ಯ ನಡೆದಿದ್ದು, ಭಾರಿ ಹಿನ್ನಡೆ ಅನುಭವಿಸಿರುವುದರಿಂದ ಮುಫ್ತಿ ಅವರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
ನಾನು ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಬಿಜ್‌ಬೆಹರಾದಲ್ಲಿ ನಾನು ಎಲ್ಲರಿಂದ ಪಡೆದ ಪ್ರೀತಿ ಮತ್ತು ಮಮತೆ ಯಾವಾಗಲೂ ನನ್ನೊಂದಿಗೆ ಇರುತ್ತದೆ. ಈ ಅಭಿಯಾನದ ಉದ್ದಕ್ಕೂ ಶ್ರಮಿಸಿದ ನನ್ನ ಪಿಡಿಪಿ ಕಾರ್ಯಕರ್ತರಿಗೆ ಕೃತಜ್ಞತೆಗಳು ಎಂದು ಇಲ್ತಿಜಾ ಮುಫ್ತಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
I accept the verdict of the people. The love & affection I received from everyone in Bijbehara will always stay with me. Gratitude to my PDP workers who worked so hard throughout this campaign 💚
— Iltija Mufti (@IltijaMufti_) October 8, 2024
ಮುಫ್ತಿಗಿಂತ ನ್ಯಾಷನಲ್ ಕಾನ್ಫರೆನ್ಸ್‌ನ ಬಶೀರ್ ಅಹ್ಮದ್ ಶಾ ವೀರಿ ಅವರು ಶ್ರೀಗುಫ್ವಾರಾ-ಬಿಜ್ಬೆಹರಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಸೋಫಿ ಯೂಸಿಫ್ ಮೂರನೇ ಸ್ಥಾನದಲ್ಲಿದ್ದಾರೆ.
ವಿಧಾನಸಭೆಯಲ್ಲಿ 90 ಸದಸ್ಯಬಲ ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ ಮೂರು ಹಂತಗಳಲ್ಲಿ ಮತದಾನ ನಡೆದವು. ಇದು 10 ವರ್ಷಗಳಲ್ಲಿ ನಡೆದ ಮೊದಲ ಚುನಾವಣೆಯಾಗಿದೆ. ಸದ್ಯ ಕಾಂಗ್ರೆಸ್ 50ರಲ್ಲಿ ಮತ್ತು ಬಿಜೆಪಿ 20 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಸ್ಪಷ್ಟ ಬಹುಮತ ದಾಟಿ ಸರ್ಕಾರ ರಚನೆಯತ್ತ ಕಾಂಗ್ರೆಸ್ ದಾಪುಗಾಲು ಇಡುತ್ತಿದೆ. (ಏಜೆನ್ಸೀಸ್)
ಜಾತಿ ಗಣತಿ ವರದಿ ರಾಜಕೀಯ ದಾಳವಾಗಿ ಬಳಕೆಗೆ ಸಿಎಂ ಆತುರ: ವಿಜಯೇಂದ್ರ ಸಂಶಯ | B Y Vijayendra