ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ, ಚಿಕಿತ್ಸೆಗಾಗಿ ತಜ್ಞ ವೈದ್ಯರ ತಂಡ ರಚಿಸಿದ ಸಿಎಂ

ತುಮಕೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಶ್ರೀಗಳ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೈದ್ಯರ ತಂಡ ರಚಿಸಿದ್ದಾರೆ.

ಸಿದ್ದಗಂಗಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇಂದು ಜಯದೇವ ಅಸ್ಪತ್ರೆ ವೈದ್ಯ ಡಾ. ಮಂಜುನಾಥ್ ನೇತೃತ್ವದ ತಂಡ ಭೇಟಿ ನೀಡುವ ಸಾಧ್ಯತೆ ಇದ್ದು, ಶ್ರೀಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ಬಿಜಿಎಸ್‌ ವೈದ್ಯ ಡಾ. ರವೀಂದ್ರ ಪ್ರತಿಕ್ರಿಯಿಸಿ, ವೈದ್ಯರ ನಿರೀಕ್ಷೆಗೆ ತಕ್ಕಂತೆ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ವಯೋಸಹಜವಾಗಿ ಶ್ರೀಗಳ ದೇಹದಲ್ಲಿ ಪ್ರೋಟೀನ್, ರಕ್ತಕಣಗಳು ಉತ್ಪತ್ತಿಯಾಗುತ್ತಿಲ್ಲ. ಆಲ್ಬಮಿನ್ ಪ್ರೋಟಿನ್ ಕೊರತೆಯಿಂದ ಶ್ರೀಗಳ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ ಎಂದು ಹೇಳಿದರು.

ಶ್ರೀಗಳು ಸ್ವತಃ ಉಸಿರಾಡಲು ಆಗುತ್ತಿಲ್ಲ. ನಿನ್ನೆ‌ ಕೂಡ ಶ್ವಾಸಕೋಶದಲ್ಲಿ 600 ಎಂಎಲ್‌ ನೀರು ತೆಗೆದಿದ್ದಾರೆ. ಈಗಲೂ ಅಸಿಸ್ಟ್ ಮಾಡಿಯೇ ಆಕ್ಸಿಜನ್‌ ನೀಡುತ್ತಿದ್ದೇವೆ. ಇದುವರೆಗೂ ಯಾರೂ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡಿಲ್ಲ. ಸರ್ಜರಿ ಮಾಡಿಸಿಕೊಂಡು ಮನೆಗೂ ಬಂದಿಲ್ಲ. ಈ ರೀತಿ ಓಡಾಡುತ್ತಿರುವುದು ಪ್ರಪಂಚದಲ್ಲೇ 6ನೇ ವ್ಯಕ್ತಿ. ಮೆಡಿಕಲ್‌ ಸೈನ್ಸ್​ನಲ್ಲೂ ಏನು ಹೇಳಲಾಗುವುದಿಲ್ಲ. ಶ್ರೀಗಳು ಇಚ್ಛಾಮರಣಿ, ಅವರಿಗೆ ಆ ಶಕ್ತಿ ಇದೆ. ಅವರ ಇಚ್ಛೆ ಇರುವವರೆಗೂ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)