ಚಿಂತಾಮಣಿ ದುರಂತದಲ್ಲೂ ‘ಅಕ್ರಮ’ದ ಛಾಯೆ: ಪ್ರಿಯಕರನಿಗಾಗಿ ಪ್ರಸಾದಕ್ಕೆ ವಿಷವಿಕ್ಕಿದಳಾ ಮಹಿಳೆ?

ಚಿಕ್ಕಬಳ್ಳಾಪುರ: ಸುಳ್ವಾಡಿ ಪ್ರಕರಣ ಮುಗಿದು ಬಹಳ ದಿನಗಳು ಕಳೆದಿಲ್ಲ. ಅಷ್ಟರಲ್ಲೇ ಚಿಂತಾಮಣಿ ವಿಷಪ್ರಸಾದ ಪ್ರಕರಣ ಎರಡು ಜೀವಗಳ ಬಲಿ ಪಡೆದಿತ್ತು. ಅಚ್ಚರಿ ವಿಚಾರ ಅಂದರೆ ಸುಳ್ವಾಡಿ ಪ್ರಕರಣಕ್ಕೆ ಹೇಗೆ ಅಕ್ರಮಸಂಬಂಧದ ನೆರಳಿತ್ತೋ, ಈ ಪ್ರಕರಣದಲ್ಲೂ ಅಕ್ರಮ ಸಂಬಂಧದ ವಾಸನೆ ಕೇಳಿಬರುತ್ತಿದೆ. ದೇವಾಲಯದ ಎದುರು‌ ಮನೆಯ ಲಕ್ಷ್ಮೀ ಹಾಗೂ ದೇವಾಲಯದ ಪಕ್ಕದ ಮನೆಯ ಲೋಕೇಶ್​ರ ಅಕ್ರಮ ಸಂಬಂಧವೇ ಈ ದುರಂತಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.

ಲಕ್ಷ್ಮೀ ಹಾಗೂ ಲೋಕೇಶನಿಗೆ ವಿವಾಹಪೂರ್ವದಿಂದಲೂ ಅಕ್ರಮ ಸಂಬಂಧವಿತ್ತಂತೆ. ಲೋಕೇಶ್ ಎರಡೂವರೆ ವರ್ಷದ ಹಿಂದೆ ಗೌರಿ ಎಂಬಾಕೆಯನ್ನ ಮದುವೆಯಾಗಿದ್ದನಂತೆ. ಇವರ ಸಂಬಂಧದ ಬಗ್ಗೆ ಲೋಕೆಶ್​ ಪತ್ನಿ ಗೌರಿಗೂ ಗೊತ್ತಿತ್ತಂತೆ. ಕಳೆದ 3 ತಿಂಗಳಿಂದ ಲೋಕೇಶ್​ ಮನೆ ಬಿಟ್ಟು ನಾಪತ್ತೆಯಾಗಿದ್ದ. ತನ್ನ ಪ್ರಿಯಕರ ದೂರವಾಗಿದ್ದನ್ನು ಸಹಿಸದ ಲಕ್ಷ್ಮಿ ಗೌರಿಯನ್ನ ಕೊಂದರೆ, ಅನೈತಿಕ ಸಂಬಂಧದ ಹಾದಿ ಸುಗಮವಾಗತ್ತದೆ ಎಂದು ಹೀಗೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಅನೈತಿಕ ಸಂಬಂಧದ ಕಹಾನಿ ತಿಳಿದುಕೊಂಡಿರುವ ಪೊಲೀಸರು ಗೌರಿ ಹೇಳಿಕೆ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಎಫ್.ಎಸ್.ಎಲ್.ರಿಪೋರ್ಟ್ ಸಹ ಪೊಲೀಸರ ಕೈ ಸೇರಿದ್ದು, ಲಕ್ಷ್ಮೀ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)