ಅಕ್ರಮ ಕಲ್ಲು ಕ್ವಾರಿಗೆ ದಾಳಿ

< ಜಿಲೆಟಿನ್ ಕಡ್ಡಿ ಸಹಿತ ಅಪಾರ ಪ್ರಮಾಣದ ಸ್ಫೋಟಕ ಪತ್ತೆ >

ಕುಂದಾಪುರ: ಶಂಕರನಾರಾಯಣ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕ, ಕೆಂಪುಕಲ್ಲು, ವಶಕ್ಕೆ ಪಡೆಯಲಾಗಿದೆ.

ಬೆಳ್ವೆ ಗ್ರಾಮ ಸೂರ್ಗೋಳಿ ಬಳಿ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಕಲ್ಲು ಕೊರೆಯುವ ಯಂತ್ರ, ಲಾರಿ, ಕಲ್ಲು, ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಮೂವರ ಪಾಲುದಾರಿಕೆಯಲ್ಲಿ ಕ್ವಾರಿ ನಡೆಯುತ್ತಿದ್ದು, ಒಬ್ಬನ ಸಹಿತ ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿದೆ.

ಶಿಲೆಕಲ್ಲು ಕ್ವಾರಿ ಮೇಲೆ ದಾಳಿ: ಕೋಟ ಠಾಣೆ ವ್ಯಾಪ್ತಿ ನೆಂಚಾರು ಬಳಿ ನಡೆಯುತ್ತಿದ್ದ ಶಿಲೆಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕ ಹಾಗೂ 32 ಜೆಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭ ಕ್ವಾರಿಗೆ ಪರವಾನಗಿ ಇದೆ ಎಂದು ಗಣಿ ನಡೆಸುವವರು ವಾದಿಸಿದ್ದು, ಪರಿಶೀಲನೆ ಬಳಿಕ ಪರವಾನಗಿ ಇಲ್ಲದಿರುವುದು ದೃಢಪಟ್ಟಿದೆ. ಮುಂಜಾಗರೂಕತೆ ಇಲ್ಲದೆ, ಸ್ಫೋಟ ತಜ್ಞರ ನೆರವು ಪಡೆಯದೆ ಅಕ್ರಮವಾಗಿ ಶಿಲೆಕಲ್ಲು ಸ್ಫೋಟಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಂಕರನಾರಾಯಣ ಹಾಗೂ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.