More

    ಅಕ್ರಮ ಕಲ್ಲು ಗಣಿಗಾರಿಕೆ

    ರಾಣೆಬೆನ್ನೂರ: ತಾಲೂಕಿನ ಗಂಗಾಪುರ, ದೇವರಗುಡ್ಡ, ಹನುಮಾಪುರ ರಸ್ತೆಯ ಬಳಿ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ಉದ್ದಕ್ಕೂ ಅಕ್ರಮ ಕಲ್ಲು ಗಣಿಗಾರಿಕೆ ಶುರುವಾಗಿದೆ. ಕಾಲುವೆ ನಿರ್ವಣಕ್ಕಾಗಿ ತೆಗೆದಿರುವ ಕಲ್ಲಿನ ಬಂಡೆ ಹಾಗೂ ಪುಡಿ ಕಲ್ಲನ್ನು ದಂಧೆಕೋರರು ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಲೂಟಿ ಮಾಡುತ್ತಿದ್ದಾರೆ.

    ಲಾರಿ, ಟ್ರ್ಯಾಕ್ಟರ್ ಮೂಲಕ ನಿತ್ಯವೂ 50ಕ್ಕೂ ಅಧಿಕ ಲೋಡ್​ಗಳಷ್ಟು ಕಲ್ಲಿನ ಬಂಡೆಗಳನ್ನು ಸುತ್ತಮುತ್ತಲು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ಅಲ್ಲಿಯೇ ಕಲ್ಲುಗಳನ್ನು ಪುಡಿ ಮಾಡಿ, ರಸ್ತೆ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಕುರಿತು ಯುಟಿಪಿ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸುತ್ತದೆ.

    ಕೆಲ ವರ್ಷದ ಹಿಂದೆ ದೇವರಗುಡ್ಡ ಗ್ರಾಮ ಸೇರಿ ಮುಂದಿನ ಗ್ರಾಮಗಳ ರೈತರಿಗೆ ನೀರು ಪೂರೈಸುವ ದೃಷ್ಟಿಯಿಂದ ಈ ಭಾಗದಲ್ಲಿ ಯುಟಿಪಿ ಕಾಲುವೆ ನಿರ್ವಿುಸಲಾಗಿದೆ. ಗುಡ್ಡ-ಗಾಡು ಪ್ರದೇಶವಾಗಿದ್ದರಿಂದ ಕಾಲುವೆ ನಿರ್ವಣಕ್ಕಾಗಿ ನೆಲದಿಂದ 20ಕ್ಕೂ ಅಧಿಕ ಅಡಿಯಷ್ಟು ಕೆಳಭಾಗದ ಭೂಮಿಯನ್ನು ಅಗೆದು ಬೃಹತ್ ಪ್ರಮಾಣ ಬಂಡೆಗಳನ್ನು ಹೊರ ತೆಗೆದು ಕಾಲುವೆ ಪಕ್ಕದಲ್ಲಿ ಸಂಗ್ರಹಿಸಲಾಗಿದೆ. ಸುಮಾರು ಎರಡು ಮೂರು ಕಿ.ಮೀ.ನಷ್ಟು ಬಂಡೆಗಳನ್ನು ಸಂಗ್ರಹಿಸಿಡಲಾಗಿದೆ.

    ಗಣಿಗಾರಿಕೆದಾರರಿಗೆ ವರದಾನ: ಕಾಲುವೆಯಿಂದ ತೆಗೆದ ಬಂಡೆಗಳು ಕಲ್ಲು ಗಣಿಗಾರಿಕೆ ಮಾಡುವವರಿಗೆ ಅನುಕೂಲವಾದಂತಿದೆ. ಅವುಗಳನ್ನು ತೆಗೆದುಕೊಂಡು ಹೋಗಿ ಮಷಿನ್​ಗೆ ಹಾಕಿದರೆ ಕಲ್ಲು-ಕಡಿ ದೊರೆಯುತ್ತದೆ. ಇದೇ ಕಾರಣಕ್ಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡುವವರು ಈ ಕಲ್ಲು ಬಂಡೆಗಳನ್ನು ಹೊತ್ತೊಯ್ಯುತ್ತಿದ್ದಾರೆ.

    3 ಸಾವಿರಕ್ಕೆ ಮಾರಾಟ: ಒಂದೆಡೆ ಕಲ್ಲು ಲೂಟಿಯಾಗುತ್ತಿದ್ದರೆ, ಅಕ್ಕಪಕ್ಕದ ಗ್ರಾಮದ ಕೆಲವರು ಕಲ್ಲಿನ ಪುಡಿ ಮಾರಾಟ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ಮೂಲಕ ಕಲ್ಲಿನ ಪುಡಿಯನ್ನು ಲೂಟಿ ಮಾಡುವ ದಂಧೆಕೋರರು, ನಗರಕ್ಕೆ ತಂದು 3 ಸಾವಿರ ರೂ.ಗೆ ಒಂದು ಲೋಡ್​ನಂತೆ ಮಾರಾಟ ಮಾಡುತ್ತಿದ್ದಾರೆ.

    ಸರ್ಕಾರದ ಬೊಕ್ಕಸಕ್ಕೆ ನಷ್ಟ: ಕಾಲುವೆ ನಿರ್ವಣಕ್ಕಾಗಿ ತೆಗೆದ ಕಲ್ಲಿನ ಬಂಡೆಗಳು ಕೋಟ್ಯಂತರ ರೂ. ಬೆಲೆ ಬಾಳುತ್ತವೆ. ಅವುಗಳನ್ನು ಸ್ಥಳದಲ್ಲಿಯೇ ಹರಾಜು ಮಾಡಿದ್ದರೆ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಲಾಭವಾಗುತ್ತಿತ್ತು. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಸರ್ಕಾರ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾದಂತಾಗಿದೆ. ಜಿಲ್ಲಾಧಿಕಾರಿ, ಯುಟಿಪಿ, ಕಂದಾಯ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಕಾಲುವೆ ತೆಗೆದ ದಿನದಿಂದಲೂ ಬಂಡೆಗಳ ಲೂಟಿ ನಡೆಯುತ್ತಲೇ ಇದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿಲ್ಲ. ಸರ್ಕಾರದ ಆಸ್ತಿ ಮತ್ತೊಬ್ಬರ ಪಾಲಾಗಬಾರದು. ಯುಟಿಪಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೂಡಲೆ ಈ ಕುರಿತು ಕ್ರಮ ಕೈಗೊಳ್ಳಬೇಕು.

    | ಮಲ್ಲೇಶಪ್ಪ ಎನ್., ದೇವರಗುಡ್ಡ ನಿವಾಸಿ

    ಯುಟಿಪಿ ಕಾಲುವೆ ಬಳಿಯ ಬಂಡೆಗಳನ್ನು ಇಲಾಖೆಯ ಪರವಾನಗಿ ಇಲ್ಲದೇ ಯಾರೂ ತೆಗೆದುಕೊಂಡು ಹೋಗಬಾರದು. ಬೇರೆಯವರು ಕೊಂಡೊಯ್ಯುತ್ತಿರುವ ಕುರಿತು ಪರಿಶೀಲಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

    | ರವೀಂದ್ರಕುಮಾರ, ಯುಟಿಪಿ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts