ಕಲ್ಲು ಗಣಿಯಲ್ಲಿ ಸ್ಫೋಟ: ಮೂವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೆ ಗಾಯ

ಕೊಪ್ಪಳ: ಅಕ್ರಮ ಕಲ್ಲು ಗಣಿಗಾರಿಕೆ ನಡೆದ ಸ್ಫೋಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಪರಿಶೀಲನೆಗೆ ಅಧಿಕಾರಿಗಳು ತೆರಳಿದ್ದರು. ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ಡೀಸೆಲ್​ ಟ್ಯಾಂಕ್​ ಅನ್ನು ಅಧಿಕಾರಿಗಳು ಒದ್ದಿದ್ದರು. ಈ ಸಂದರ್ಭದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಭೂ ವಿಜ್ಞಾನಿ ದಿನೇಶ್ ಗೌಡ, ಎಫ್‌ಡಿಸಿ ನವೀನ್‌ಕುಮಾರ್, ಚಾಲಕ ಮೆಹಬೂಬ್‌ಗೆ ಕೈ, ಕಾಲು, ಮುಖದ ಚರ್ಮ ಸುಟ್ಟು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಧಿಕಾರಿಗಳ ಕಲ್ಲು ಗಣಿ ಸಮೀಪ ತೆರಳಿದಾಗ ವಾಹನದ ಸದ್ದು ಕೇಳಿದ ಅಕ್ರಮ ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದರು. ಆ ನಂತರ ಪರಿಶೀಲನೆ ವೇಳೆ ಸ್ಫೋಟ ಸಂಭವಿಸಿದೆ. ಅಕ್ರಮ ದಂಧೆಕೋರರು ಉದ್ದೇಶ ಪೂರ್ವಕವಾಗಿ ಸ್ಫೋಟ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ.