ಅಕ್ರಮ ಮರಳು ಸಾಗಣೆ

ವಿಜಯವಾಣಿ ವಿಶೇಷ ರಾಣೆಬೆನ್ನೂರ

ದಂಡ ತುಂಬದ ಹಾಗೂ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಮರಳು ಗಣಿಗಾರಿಕೆ ಮಾಡಿದ ಆರೋಪದಡಿ ಅಧಿಕಾರಿಗಳು ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಿದ್ದಾರೆ. ಆದರೆ, ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಹಾಗೂ ಎತ್ತಿನಬಂಡಿ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಿರಂತರವಾಗಿದೆ.

ತಾಲೂಕಿನ ಕೋಟಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಿಂದ ನಿತ್ಯವೂ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ನದಿಪಾತ್ರದ ಮರಳನ್ನು ತಂದು ರೈತರ ಜಮೀನುಗಳಲ್ಲಿ ಸಂಗ್ರಹಿಸುವ ದಂಧೆಕೋರರು, ರಾತ್ರೋರಾತ್ರಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.

ನಿಷೇಧದ ನಡುವೆಯೂ ಟ್ರ್ಯಾಕ್ಟರ್ ಬಳಕೆ: ಟ್ರ್ಯಾಕ್ಟರ್​ಗಳನ್ನು ಮರಳು ಸಾಗಣೆಗೆ ಬಳಸಬಾರದು. ಟ್ರ್ಯಾಕ್ಟರ್​ಗಳಿಗೆ ಪರವಾನಗಿ ಹಾಗೂ ಪಾಸ್ ನೀಡಬಾರದು ಎಂದು 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಮಂಜುನಾಥ ನಾಯಕ ಆದೇಶಿಸಿದ್ದರು. ಆದರೆ ಇದೀಗ ಮಳೆಗಾಲ ಆರಂಭವಾಗಿದ್ದರಿಂದ ಜಮೀನುಗಳ ರಸ್ತೆಯಲ್ಲಿ ಹಾಗೂ ನದಿಪಾತ್ರದಲ್ಲಿ ಲಾರಿಗಳು ಸಿಲುಕಿಕೊಳ್ಳುತ್ತವೆ ಎಂಬ ಕಾರಣಕ್ಕೆ ಟ್ರ್ಯಾಕ್ಟರ್​ಗಳನ್ನು ಬಳಸಲಾಗುತ್ತಿದೆ.

ನೆಪಕ್ಕೆ ಎತ್ತಿನ ಬಂಡಿ: ಎತ್ತಿನ ಬಂಡಿಯಾದರೆ ಪೊಲೀಸರೂ ತಡೆಯುವುದಿಲ್ಲ. ‘ನಮ್ಮ ಸ್ವಂತ ಮನೆ ಕೆಲಸಕ್ಕೆ ಕೊಂಚ ಒಯ್ಯುತ್ತಿದ್ದೇವೆ ಎಂದರೆ ಯಾರೂ ಏನೂ ಮಾಡಲ್ಲ’ ಎನ್ನುವ ಲೆಕ್ಕಾಚಾರ ಹಾಕಿಕೊಂಡ ಕೆಲವರು ಎತ್ತಿನ ಬಂಡಿಯಲ್ಲಿ ಅಕ್ರಮವಾಗಿ ಮರಳು ಸಾಗಣೆಗೆ ಮುಂದಾಗಿದ್ದಾರೆ. ಕೋಟಿಹಾಳ, ಮುಷ್ಟೂರು, ಉದಗಟ್ಟಿ, ಬೇಲೂರು, ಹರನಗಿರಿ, ಯಕ್ಲಾಸಪುರ, ಐರಣಿ, ಹಿರೇಬಿದರಿ ಗ್ರಾಮಗಳಲ್ಲಿ ಎತ್ತಿನ ಬಂಡಿಗಳಲ್ಲಿ ಮರಳನ್ನು ತಂದು ಒಂದೆಡೆ ಸಂಗ್ರಹಿಸುವ ಖದೀಮರು, 1 ಲಾರಿಯಷ್ಟು ಸಂಗ್ರಹವಾಗುತ್ತಿದ್ದಂತೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಜಿಲ್ಲಾಡಳಿತ ನಿದ್ದೆಗೆ ಜಾರಿದಂತಿದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚುವ ಅಕ್ರಮ ಮರಳು ದಂಧೆಕೋರರರ ವಿರುದ್ಧ ಜಿಲ್ಲಾಧಿಕಾರಿ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಕೋಟಿಹಾಳ ಜನತೆಗೆ ನಿದ್ದೆಯಿಲ್ಲ: ಕೋಟಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಿಂದ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರಿಗೆ ನಿದ್ದೆಯೇ ಇಲ್ಲದಂತಾಗಿದೆ. ಆದ್ದರಿಂದ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಮಟ್ಟಹಾಕಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, ಜನ ಬೇಸತ್ತು ಹೋಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

| ನಾಗರಾಜ ಆಡಿನವರ, ಕೋಟಿಹಾಳ ಗ್ರಾಮಸ್ಥ

ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುವುದು ತಪ್ಪು. ಇದಕ್ಕೆ ಪರವಾನಗಿ ಇರುವುದಿಲ್ಲ. ಎತ್ತಿನ ಬಂಡಿ ಮೂಲಕವೂ ಸಾಗಿಸುವಂತಿಲ್ಲ. ಕೋಟಿಹಾಳ ಗ್ರಾಮದ ಬಳಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುತ್ತಿರುವ ಕುರಿತು ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು.

| ಸಿ.ಎಸ್. ಕುಲಕರ್ಣಿ, ತಹಸೀಲ್ದಾರ್ ರಾಣೆಬೆನ್ನೂರ

Leave a Reply

Your email address will not be published. Required fields are marked *