ಮಾಜಿ ಸಿಎಂ ಕ್ಷೇತ್ರದಲ್ಲಿ ನಿರಂತರ ಮರಳು ಲೂಟಿ

| ಅಶೋಕ ಶೆಟ್ಟರ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಹಲವು ವರ್ಷ ಗಳಿಂದ ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಎಂಬುವುದು ಈವರೆಗೂ ಮರೀಚಿಕೆಯಾಗಿಯೇ ಉಳಿದಿದೆ.

ಸದ್ಯ ಬಾದಾಮಿ ತಾಲೂಕಿನಲ್ಲಿ ಅಧಿಕೃತವಾಗಿ 11 ಬ್ಲಾಕ್​ಗಳಲ್ಲಿ ಮರಳುಗಾರಿಕೆಗೆ ಗುತ್ತಿಗೆ ನೀಡಲಾಗಿದೆ. (ಅಕ್ರಮವಾಗಿ ನಡೆಯುತ್ತಿರುವ ಜಾಗಗಳಿಗೆ ಲೆಕ್ಕವಿಲ್ಲ.) ಅಧಿಕೃತ ಬ್ಲಾಕ್​ಗಳಲ್ಲಿ 10 ಮೆಟ್ರಿಕ್ ಟನ್ ಮರಳಿಗೆ 4800 ರೂಪಾಯಿ ನಿಗದಿಪಡಿಸಲಾಗಿದೆ. ಆದರೆ, ಗುತ್ತಿಗೆದಾರರು ಮಾತ್ರ ಒಂದೇ ಒಂದು ಟ್ರಿಪ್​ನ್ನು ಕೂಡ ಆ ಬೆಲೆಗೆ ಕೊಟ್ಟಿರುವ ಉದಾಹರಣೆ ಇಲ್ಲವಾಗಿದೆ.

ಬ್ಲಾಕ್​ಗಳಲ್ಲಿ ಕನಿಷ್ಠ 12 ರಿಂದ 15 ಸಾವಿರ ರೂ. ಪಡೆಯುತ್ತಿದ್ದಾರಂತೆ. ಇದು ಅವರು, ಇವರು ಹೇಳುತ್ತಿರುವುದಲ್ಲ. ಸ್ವತಃ ಆ ಬ್ಲಾಕ್​ಗಳಲ್ಲಿ ನಿತ್ಯ ಮರಳು ಸಾಗಿಸುವ ಟಿಪ್ಪರ್ ಮಾಲೀಕರೇ ಇದೀಗ ತಮ್ಮ ಮೌನ ಮುರಿದು ಕರಾಳ ದಂಧೆಯ ಅಸಲಿ ವ್ಯವಹಾರ ಹೊರಹಾಕಿದ್ದಾರೆ. ಹೆಚ್ಚುವರಿ ಬೆಲೆ ಜತೆಗೆ ಡೀಸೆಲ್, ಡ್ರೖೆವರ್ ಪಗಾರ ಸೇರಿ ಜನರು 20 ಸಾವಿರ ರೂ.ಗೆ ಒಂದು ಟಿಪ್ಪರ್ ಮರಳು ಕೊಂಡುಕೊಳ್ಳುವ ಅನಿವಾರ್ಯತೆ ಇಲ್ಲಿ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಅಧಿಕೃತ ಮರಳುಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರೂ ಸಕ್ರಮದಲ್ಲಿ ಅಕ್ರಮದ ಕರಾಳ ದಂಧೆ ನಡೆಯುತ್ತಿದೆ. ನಿಗದಿ ಪಡಿಸಿದ ಬೆಲೆಗಿಂತಲೂ ಎರಡ್ಮೂರು ಪಟ್ಟು ಅಧಿಕ ಹಣವನ್ನು ಗುತ್ತಿಗೆದಾರರು ಪಡೆಯುತ್ತಿದ್ದಾರೆ. ನಿಗದಿ ಪಡಿಸಿದ ಬೆಲೆಗೆ ಮರಳು ಪೂರೈಕೆ ಮಾಡಿದಲ್ಲಿ ಜನರಿಗೆ 8 ರಿಂದ 9 ಸಾವಿರ ರೂ.ಗಳಿಗೆ ಒಂದು ಟಿಪ್ಪರ್ ಪೂರೈಸಲು ಸಿದ್ಧರಿದ್ದೇವೆ. ಆದರೆ, ಅಧಿಕಾರಿಗಳೇ ಅಕ್ರಮದಲ್ಲಿ ಶಾಮಿಲು ಆಗಿದ್ದರಿಂದ ಅಂಧಾದಂಧೆ ನಡೆದಿದೆ. ಗುತ್ತಿಗೆದಾರರೇ ಮುಂದೆ ನಿಂತು ಓವರ್ ಲೋಡ್ ಮಾಡುವಂತೆ ತಾಕೀತು ಮಾಡುತ್ತಾರೆ. ಒಪ್ಪದಿದ್ದಲ್ಲಿ ಅಂಥ ಟಿಪ್ಪರ್​ಗಳಿಗೆ ಮರಳು ಕೊಡುತ್ತಿಲ್ಲ. ಒಂದು ಪರ್ವಿುಟ್​ನಲ್ಲಿ ನಾಲ್ಕೈದು ಲೋಡ್ ಸಾಗಾಟ ಮಾಡಲಾಗುತ್ತಿದೆ. ಇದು ಗೊತ್ತಿದ್ದರೂ ಗೊತ್ತಿಲ್ಲ ದಂತೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಬಾದಾಮಿ ತಾಲೂಕಲ್ಲಿ ನಿತ್ಯ 15 ರಿಂದ 20 ಲಕ್ಷ ರೂ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಜೈಹನುಮಾನ ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ಮಹಾದೇವ ದೊಡಮನಿ, ಉಪಾಧ್ಯಕ್ಷ ಗೋಪಾಲ ಲಮಾಣಿ ಆರೋಪಿಸುತ್ತಾರೆ.

ಪ್ರಭಾವಿಗಳು-ಅಧಿಕಾರಿಗಳತ್ತ ಚಿತ್ತ: ಬಾದಾಮಿ ತಾಲೂಕಿನಲ್ಲಿ ಮಾತ್ರ ಮರಳುಗಾರಿಕೆ ನಡೆಯುತ್ತಿದೆ. ಇಡಿ ಜಿಲ್ಲೆಗೆ ಇಲ್ಲಿಂದಲೇ ಮರಳು ಪೂರೈಕೆಯಾಗುತ್ತಿದೆ. ಇಲ್ಲಿ ಅಕ್ರಮಕೋರರ ಕಬಂಧ ಬಾಹು ಎಲ್ಲೆಡೆ ವ್ಯಾಪಿಸಿದೆ. ಪರಿಣಾಮ ಅವರು ಆಡಿದ್ದೇ ಆಟ. ಅಕ್ರಮಕ್ಕೆ ಕೆಲ ಪ್ರಭಾವಿ ಹಾಗೂ ಅಧಿಕಾರಿ ವರ್ಗದವರು ನೆರಳಾಗಿ ನಿಂತಿದ್ದಾರೆ ಎಂದು ಟಿಪ್ಪರ್ ಮಾಲೀಕರು ನೇರವಾಗಿಯೇ ಆರೋಪಿ ಸುತ್ತಿದ್ದಾರೆ. ಮುಖ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೆಡೆ ಎಲ್ಲರೂ ಬೊಟ್ಟು ತೋರಿಸುತ್ತಿದ್ದಾರೆ.

ಬ್ಲಾಕ್​ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಇಲ್ಲ: ಗಣಿಗಾರಿಕೆ ಮತ್ತು ಸಾಗಾಟ ಪಾರದರ್ಶಕವಾಗಿ ನಡೆಯಲು ಬ್ಲಾಕ್ ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕೆನ್ನುವ ನಿರ್ಧಾರ ಮಾಡ ಲಾಗಿತ್ತು. ಆದರೆ, ಅದು ಜಾರಿಗೆ ಬಂದಿಲ್ಲ. ಹೀಗಾಗಿ ಅಲ್ಲಿ ನಡೆಯುವ ಅಕ್ರಮ ದಂಧೆ ಅಲ್ಲಿಯೇ ಮುಕ್ತಾಯವಾಗುತ್ತಿದೆ. ಕೆಲ ಅಧಿ ಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಎಂದು ಟಿಪ್ಪರ್ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಚಿವರು, ಡಿಸಿ ದಾಳಿಗೂ ಕ್ಯಾರೇ ಅಂದಿರಲಿಲ್ಲ: ಮರಳುಗಾರಿಕೆ ತಡೆಗಟ್ಟುವುದಾಗಿ ಕೆಲ ವರ್ಷಗಳ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಹಾಗೂ ಅಂದಿನ ಡಿಸಿ ಪಿ.ಎ. ಮೇಘಣ್ಣವರ ತಡರಾತ್ರಿ ದಾಳಿ ನಡೆಸಿದ್ದರು. ವಿಚಿತ್ರವೆಂದರೆ ಇವರು ದಾಳಿ ಮಾಡುತ್ತಾರೆ ಎನ್ನುವ ವಿಷಯ ಲೀಕ್ ಆಗಿ, ಬ್ಲಾಕ್​ಗಳಿಗೆ ಹೋಗುವಷ್ಟರಲ್ಲಿ ಅಕ್ರಮಕೋರರು ಸ್ಥಳ ಖಾಲಿ ಮಾಡಿದ್ದರು. ಅಕ್ರಮಕೋರರ ಬೇರು ಎಷ್ಟು ಹಬ್ಬಿದೆ ಎನ್ನುವುದಕ್ಕೆ ಇದು ಸಾಕ್ಷಿ ಆಗಿದೆ.

ಲೂಟಿ ಸಾಬೀತಾದರೂ ಕ್ರಮ ಆಗಲಿಲ್ಲ: ಅಕ್ರಮ ಮರಳುಗಾರಿಕೆಗೆ ಸಿಕ್ಕು ನದಿ ಒಡಲು ನಲುಗತ್ತಿದೆ. ನದಿ ಪಾತ್ರಗಳೇ ಬದಲಾಗಿ ಹೋಗಿವೆ. ಈ ಹಿಂದೆ ಹುನಗುಂದ ತಾಲೂಕಿನಲ್ಲಿ 7ಕೋಟಿ ರೂ. ಮರಳು ಲೂಟಿ ಆಗಿತ್ತು. ಇದರಲ್ಲಿ ಕೆಲ ಅಧಿಕಾರಿಗಳೇ ಶಾಮೀಲಾಗಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ಆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಆಗದಂತೆ ಪ್ರಭಾವಿಗಳು ರಕ್ಷಣೆ ನೀಡಿದ್ದರು. ಹಿಂದಿನ ಎಎಸ್​ಪಿ ಲಕ್ಷ್ಮಿ ಪ್ರಸಾದ ಅಕ್ರಮ ಮರಳುಗಾರಿಕೆ ವಿರುದ್ಧ ಒಬಂಟಿ ಹೋರಾಟ ನಡೆಸಿದ್ದರೂ ಅವರ ಕೈಕಟ್ಟಿಹಾಕುವ ಪ್ರಯತ್ನಗಳು ನಡೆದಿದ್ದವು. ಅವರು ವರ್ಗಾವಣೆಯಾದಾಗ ಅಕ್ರಮಕೋರರು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ.

ಇತ್ತೀಚೆಗೆ ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಮರಳುಗಾರಿಕೆ ಬಗ್ಗೆ ಚರ್ಚೆ ಆಗಿದೆ. ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್, ಕಂದಾಯ ಸೇರಿ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಅಕ್ರಮ ನಡೆಯುತ್ತಿರುವ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ಒದಗಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಲ್ಲ.

| ಗಂಗೂಬಾಯಿ ಮಾನಕರ ಜಿಪಂ ಸಿಇಒ