ಅಕ್ರಮ ಮರಳುಗಾರಿಕೆಗೆ ಪೊಲೀಸರ ಸಾಥ್?

ರಾಣೆಬೆನ್ನೂರ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ತುಂಗಭದ್ರಾ ನದಿಪಾತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದು, ದಂಧೆಕೋರರ ಕಣ್ಣು ಬಿದ್ದಿದೆ.

ತಾಲೂಕಿನ ಮೇಡ್ಲೇರಿ, ಬೇಲೂರು, ಹಿರೇಬಿದರಿ, ಐರಣಿ, ಕೋಣನತಂಬಿಗಿ, ಕುದುರೆಹಾಳ ಸೇರಿ ನದಿ ಪಾತ್ರದ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ರಾತ್ರಿ ಸಮಯದಲ್ಲಿ ಪೊಲೀಸರ ಸಹಕಾರದೊಂದಿಗೆ ಸಾಗಣೆ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ತಾಲೂಕಿನ ತುಂಗಭದ್ರಾ ನದಿಪಾತ್ರದ 11 ಬ್ಲಾಕ್​ಗಳಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಸ್ಥಳ ಗುರುತಿಸಿ, ನಿರ್ವಿುತಿ ಕೇಂದ್ರದ ಮೂಲಕ ಜನರಿಗೆ ಮರಳು ವಿತರಿಸಲು ಪ್ರಯತ್ನ ನಡೆಸಿತ್ತು. ಆದರೆ, ಯಾರ್ಡ್​ಗಳಲ್ಲಿ ಸಿಸಿ ಕ್ಯಾಮರಾ, ವೇಬ್ರಿಜ್ ಕೊರತೆಯನ್ನೇ ಬಂಡಾವಾಳ ಮಾಡಿಕೊಂಡ ಕೆಲ ನಕಲಿ ಹೋರಾಟಗಾರರು ನಿರ್ವಿುತಿ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದರು. ನಂತರ ಯಾರ್ಡ್​ಗಳಲ್ಲಿನ ಅಧಿಕಾರಿಗಳನ್ನು ತಮ್ಮ ಹಿಡಿತಕ್ಕೆ ತರುವ ಮೂಲಕ ಸ್ವ ಹಿತಾಸಕ್ತಿಗೆ ತಕ್ಕಂತೆ ಬಳಸಿಕೊಂಡಿದ್ದರು. ಪಾಸ್ ವಿತರಣೆಯಲ್ಲೂ ಕೈಚಳಕ ತೋರಿದ ಹೋರಾಟಗಾರರು ಒಂದೇ ಪಾಸ್​ನಲ್ಲಿ ಮೂರು ಟ್ರಿಪ್ ಮರಳು ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ.

ಪಾಸ್ ಇಲ್ಲ, ಪರ್ವಿುಟ್ ಇಲ್ಲ!: ಈ ಮುಂಚೆ ಪ್ರತಿ ಒಂದು ಟ್ರಿಪ್​ಗೆ ಅಂತರ್ಜಾಲ ಮೂಲಕ ಸರ್ಕಾರಕ್ಕೆ ಹಣ ಪಾವತಿಸಿ ನಿರ್ವಿುತಿ ಕೇಂದ್ರ ಹಾಗೂ ಟೆಂಡರ್ ಯಾರ್ಡ್​ಗಳಿಂದ ಪಾರದರ್ಶಕವಾಗಿ ಪಾಸ್ ವಿತರಿಸಲಾಗುತ್ತಿತ್ತು. ಒಂದು ಚಿಕ್ಕ ಕಟ್ಟಡ ನಿರ್ವಿುಸಿಕೊಳ್ಳುತ್ತಿದ್ದರೂ ಮನೆ ಮಾಲೀಕರ ಹೆಸರಿನಲ್ಲಿ ಕೆಲವರು ಮೂರ್ನಾಲ್ಕು ಪಾಸ್ ಪಡೆದು, ಮರಳು ಸಾಗಿಸುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಾಗ ಜಿಲ್ಲಾಧಿಕಾರಿಗಳು ಪಾಸ್ ವಿತರಣೆ ಸ್ಥಗಿತಗೊಳಿಸಿದ್ದರು. ಇದರಿಂದ ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಗೆ ಸಮಸ್ಯೆ ಎದುರಾಗಿತ್ತು. ಮರಳಿನ ಬೇಡಿಕೆಯನ್ನು ಅರಿತ ದಂಧೆಕೋರರು ಪಾಸ್, ಪರ್ವಿುಟ್ ಇಲ್ಲದೆ ಈಗ ರಾತ್ರಿ ವೇಳೆ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪೊಲೀಸರ ಕುಮ್ಮಕ್ಕು ?: ಗ್ರಾಮೀಣ ಠಾಣೆಯ ಮೂವರು, ಗುತ್ತಲ ಠಾಣೆಯ ಇಬ್ಬರು, ಕುಮಾರಪಟ್ಟಣದ ಪೇದೆಯೊಬ್ಬರು ಅಕ್ರಮ ಮರಳು ಸಾಗಣೆ ಜತೆಗೆ ದಂಧೆಕೋರರೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಕ್ರಮ ಮರಳು ದಂಧೆಕೋರರು ನಡೆಸಿದ ಮೊಬೈಲ್ ಸಂಭಾಷಣೆ ವಿಜಯವಾಣಿ ಪತ್ರಿಕೆಗೆ ಲಭಿಸಿದ್ದು, ಪೊಲೀಸರು ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಹದ್ದುಬಸ್ತಿನಲ್ಲಿಡುವರೇ ಸಚಿವ ಶಂಕರ: ಅಕ್ರಮ ಚಟುವಟಿಕೆ ಹಾಗೂ ನಕಲಿ ಹೋರಾಟಗಾರರ ವಿರುದ್ಧ ಅರಣ್ಯ ಮತ್ತು ಪರಿಸರ ಖಾತೆ ಸಚಿವ, ಕ್ಷೇತ್ರದ ಶಾಸಕ ಆರ್. ಶಂಕರ ಅವರು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಹಿಂದಿನ ಕ್ಷೇತ್ರದ ಶಾಸಕರ ಹೆಸರನ್ನೇ ಬಂಡವಾಳ ಮಾಡಿಕೊಂಡವರು ಇದೀಗ ಶಂಕರ ಕಚೇರಿಯತ್ತ ಸುಳಿದಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.