ಅಕ್ರಮ ಮರಳುಗಾರಿಕೆ 40 ಪ್ರಕರಣ ದಾಖಲು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017-18 ಮತ್ತು 2018-19ನೇ ಸಾಲಿನ ನವೆಂಬರ್‌ವರೆಗೆ ಅಕ್ರಮ ಮರಳಗಾರಿಕೆಗೆ ಸಂಬಂಧಿಸಿ ವಿವಿಧ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿ, 30.76 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. 2017-18, 18-19ರ ಅಕ್ಟೋಬರ್‌ವರೆಗೆ 24 ಅಕ್ರಮ ಮರಳುಗಾರಿಕೆ ಸಾಗಾಟ ಪತ್ತೆಹಚ್ಚಿ 28.42 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಕಾಮಗಾರಿ ಕುಂಠಿತ: ದ.ಕ, ಉ.ಕ, ಉಡುಪಿ ಜಿಲ್ಲೆಯಲ್ಲಿ ಮರಳು ಅಭಾವದಿಂದ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಒಪ್ಪಿಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವರು, ಕರಾವಳಿ ಜಿಲ್ಲೆಯ ಸಿಆರ್‌ಝಡ್ ನದಿ ಪಾತ್ರಗಳಲ್ಲಿ ಸ್ಥಳೀಯರಿಗೆ ಮಾನವ ಶ್ರಮದಿಂದ ಮರಳು ತೆರವುಗೊಳಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾಂಪ್ರದಾಯಿಕವಾಗಿ ಮಾನವ ಶ್ರಮದಿಂದ ಮರಳು ದಿಬ್ಬಗಳನ್ನು ತೆರವುಗೊಳಿಸುವ ವ್ಯಕ್ತಿಗೆ ಮಾತ್ರ ಇ-ಹರಾಜು ಮೂಲಕ ಮರಳುಗಾರಿಕೆ ಗುತ್ತಿಗೆ ನೀಡಲು ಅವಕಾಶ ನೀಡಲಾಗಿದೆ ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ 76 ಮಂದಿಗೆ ಮರಳು ದಿಬ್ಬ ತೆರವುಗೊಳಿಸಲು ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ನಾನ್‌ಸಿಆರ್‌ಝಡ್ ಪ್ರದೇಶದಲ್ಲಿ ಇ-ಟೆಂಡರ್, ಹರಾಜು ಪ್ರಕ್ರಿಯೆಯ ಮೂಲಕ ಗುತ್ತಿಗೆ ಮಂಜೂರು ಮಾಡಲಾಗಿದ್ದು, ದ.ಕ.ಜಿಲ್ಲೆಯಲ್ಲಿ ಈಗಾಗಲೇ ಎರಡು ಮರಳು ಬ್ಲಾಕ್‌ಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.