- ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಶಾಸ್ತ್ರೀ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ
- 1150 ರೈತರು ಅಕ್ರಮ ಸಕ್ರಮ ಯೋಜನೆಯಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅರ್ಜಿ
ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಸೋಮವಾರ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಶಾಸ್ತ್ರೀ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಸೀಲ್ದಾರ್ ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ರಾಜ್ಯದ ರೈತರು ಸಂಕಷ್ಟ ಎದುರಿಸುತ್ತಿದ್ದು, ಅವರ ಸಾಲ ಮನ್ನಾ ಮಾಡಬೇಕು. ತಾಲೂಕಿನ ಸುಮಾರು 1150 ರೈತರು ಅಕ್ರಮ ಸಕ್ರಮ ಯೋಜನೆಯಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಸರ್ಕಾರ ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಲೈನ್ಮನ್ಗಳ ಕಾರ್ಯಕ್ಕೆ ಗ್ರಾಮಸ್ಥರ ಸಲಾಂ – ಹರಿಯುವ ಹಳ್ಳದಲ್ಲಿ ನಿಂತು ವಿದ್ಯುತ್ ಸಂಪರ್ಕ ನೀಡಿದ ಹೆಸ್ಕಾಂ ಸಿಬ್ಬಂದಿ
ಎಐಟಿಯುಸಿ ತಾಲೂಕು ಕಾರ್ಯದರ್ಶಿ ಹಲಗಿ ಸುರೇಶ ಮಾತನಾಡಿ, ರೈತರ ಬೆಳೆ ವಿಮೆ ಹಾಗೂ ಇತರ ಪರಿಹಾರ ಹಣವನ್ನು ಬ್ಯಾಂಕ್‌ಗಳು ಸಾಲಕ್ಕಾಗಿ ಜಮಾ ಮಾಡಿಕೊಳ್ಳಲಾಗುತ್ತಿವೆ. ಸಿಂಗಟಾಲೂರು ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಬರದಿಂದ ಬೆಳೆ ನಷ್ಟವಾದವರಿಗೆ ನೆರವು ನೀಡಿಲ್ಲ. ರಾಜ್ಯದ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಟ್ಟಿಲ್ಲ. ಸರ್ಕಾರ ಕೇವಲ ಕೈಗಾರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ದೂರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಬಿ.ಸೋಮಶೇಖರಪ್ಪ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಶಿವರಾಜ, ಉಪಾಧ್ಯಕ್ಷ ಶಂಕರಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಲೇಶ್ ಬೆನ್ನೂರು ಇತರರಿದ್ದರು.