ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗದಲ್ಲಿರುವ ಚಿಕ್ಕಜಾಲ ಮತ್ತು ದೊಡ್ಡಜಾಲ ಕೆರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳ ನಿರ್ಮಾಣ ವಿಚಾರವಗಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಚಿಕ್ಕಜಾಲ ನಿವಾಸಿಗಳಾದ ಸಿ.ಎನ್ ರಾಮಕೃಷ್ಣ ಮತ್ತಿತತರಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೊಡ್ಡಜಾಲ ಮತ್ತು ಚಿಕ್ಕಜಾಲ ಕೆರೆಗಳ ಬಫರ್ ಜೋನ್‌ನಲ್ಲಿ ಒತ್ತುವರಿ ಮಾಡಿ ಕ್ಲೀನ್ ಸಿಟಿ ಡೆವಲಪರ್ ಪ್ರೈವೇಟ್ ಲಿಮಿಟೆಡ್ ಮತ್ತು ಲಕ್ಷ್ಮೀ ಎಂಟರ್ ಪ್ರೈಸಸ್ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಬೇಕು.
ದೊಡ್ಡಜಾಲ ಮತ್ತು ಚಿಕ್ಕಜಾಲ ಕೆರೆಗಳನ್ನು ಸರ್ವೇಕಾರ್ಯ ನಡೆಸ ಒತ್ತುವರಿಗಳನ್ನು ನಿಗದಿತ ಸಮಯದಲ್ಲಿ ತೆರವು ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು. ವಾದವನ್ನು ಆಲಿಸಿದ ಪೀಠ, ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ. 4ಕ್ಕೆ ಮುಂದೂಡಿತು.