ಮತ್ತೆ ಶಾಂತಿ ಕದಡುವ ಯತ್ನ

ವಿಟ್ಲ/ ಬಂಟ್ವಾಳ/ಈಶ್ವರಮಂಗಲ:  ವಿಟ್ಲ ಆಸುಪಾಸು ಹಾಗೂ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ತಂಡ ಗಲಭೆ ಸೃಷ್ಟಿಸುವ ಉದ್ದೇಶದಿಂದ 12 ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳ ಮೇಲೆ ಮಂಗಳವಾರ ಕಲ್ಲು ತೂರಾಟ ನಡೆಸಲಾಗಿದೆ.
ಬಂಟ್ವಾಳ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬಸ್ ಚಾಲಕರಾದ ಪ್ರತಾಪ್(28), ಶೀನಪ್ಪ(46), ಶಾಲಾ ಮಕ್ಕಳಾದ ವಾಲಿನ್ ಮರಿಯಾ(15), ಸಾಕ್ಷಿ(7), ಸುಷ್ಮಾ(14) ಗಾಯಗೊಂಡಿದ್ದಾರೆ. ವಿಟ್ಲ ವ್ಯಾಪ್ತಿಯ ಮೈರದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಕೇರಳ ಸರ್ಕಾರಿ ಬಸ್ ಚಾಲಕ ಕಣ್ಣೂರು ನಿವಾಸಿ ಸುರೇಶ್ ಕುಮಾರ್ ಅವರಿಗೆ ಗಾಯವಾಗಿದೆ.

ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಸೊತ್ತುಗಳಿಗೆ ಹಾನಿಯೆಸಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಬಂಟ್ವಾಳ ನಗರ ಠಾಣೆ 3, ಗ್ರಾಮಾಂತರ ಠಾಣೆ 1, ವಿಟ್ಲ ಠಾಣೆ 4, ಪುತ್ತೂರು ನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ವಿಟ್ಲದಲ್ಲಿ 2 ಖಾಸಗಿ ಬಸ್‌ಗಳಿಗೆ ಕಲ್ಲೆಸೆದ ಕುರಿತು ಪ್ರಕರಣ ದಾಖಲಾಗಿಲ್ಲ.

ಘಟನೆಗಳಿಗೆ ನಿರ್ದಿಷ್ಟ ಕಾರಣ ಪೊಲೀಸರು ತಿಳಿಸಿಲ್ಲ. ಎಎಸ್ಪಿ ಸೈದುಲ್ ಅಡಾವತ್ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಎಸ್‌ಐ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನ ಹೆಚ್ಚುವರಿ ಎಸ್‌ಪಿ ವಿಕ್ರಂ ಮಾರ್ಗದರ್ಶನ ನೀಡುತ್ತಿದ್ದು, ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ, ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ವಿಟ್ಲಕ್ಕೆ ಬೇಟಿ ನೀಡಿ ಕಾನೂನು ಸುವ್ಯವಸ್ಥೆ ನಿಭಾಯಿಸಿದರು. ವಿಟ್ಲ ಉಪನಿರೀಕ್ಷಕ ಯಲ್ಲಪ್ಪ ಹಾಗೂ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಬಂಟ್ವಾಳ ಹಾಗೂ ವಿಟ್ಲ ಭಾಗಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿಟ್ಲ 6 ಬಸ್‌ಗೆ ಹಾನಿ: ಕಾಸರಗೋಡು-ಪುತ್ತೂರು ಸಂಪರ್ಕ ಕಲ್ಪಿಸುವ ಕೇರಳ ಸರ್ಕಾರಿ ಬಸ್ ಮೇಲೆ ಮೈರ ಹಾಗೂ ಉರಿಮಜಲು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಸುಮಾರು 54 ಸಾವಿರ ರೂ. ಹಾನಿ ಅಂದಾಜಿಸಲಾಗಿದೆ.

ಬದಿಯಡ್ಕ-ಪುತ್ತೂರು ನಡುವಿನ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗೆ ವಿಟ್ಲ ಸರ್ಕಾರಿ ಬಸ್ ನಿಲ್ದಾಣ ಬಳಿ ಹಾಗೂ ಸಾಲೆತ್ತೂರು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದು ಗಾಜು ಹುಡಿಯಾಗಿದ್ದು, 40 ಸಾವಿರ ರೂ. ಹಾನಿ ಅಂದಾಜಿಸಲಾಗಿದೆ. ಸಾಲೆತ್ತೂರು ಹಾಗೂ ಪರ್ತಿಪ್ಪಾಡಿಯಲ್ಲಿ ಖಾಸಗಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಬೆನ್ನಟ್ಟಿದರೂ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

ಕೇರಳ ಬಸ್ ಚಾಲಕರಾದ ಸುರೇಶ್ ಕುಮಾರ್ ಹಾಗೂ ಶ್ರೀಧರ್, ಕರ್ನಾಟಕ ಬಸ್ ಚಾಲಕರಾದ ವೀರಯ್ಯ ಜಿ.ಹಿರೇಮಠ ಹಾಗೂ ಸತೀಶ್ ನೀಡಿದ ದೂರಿನ ಪ್ರಕಾರ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಸೊತ್ತುಗಳ ಹಾನಿ ಬಗ್ಗೆ ಪ್ರಕರಣ ದಾಖಲಾಗಿದೆ. ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಟ್ವಾಳದಲ್ಲಿ 4 ಕಡೆ
ಸೋಮವಾರ ರಾತ್ರಿ 8.45ರ ವೇಳೆಗೆ ಬಿ.ಸಿ.ರೋಡಿನ ಭಂಡಾರಿಬೆಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಧರ್ಮಸ್ಥಳದಿಂದ ಮಂಗಳೂರು ಕಡೆ ಬರುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಸಹಸವಾರ ಕಲ್ಲೆಸೆದಿದ್ದು, ಬಸ್ ಮುಂಭಾಗದ ಗಾಜಿಗೆ ಹಾನಿಯಾಗಿದೆ.
ಮಂಗಳವಾರ ಬೆಳಗ್ಗೆ 8.45ರ ವೇಳೆಗೆ ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್‌ಗೆ ಪಾಣೆಮಂಗಳೂರು ಮಾಂಡೋವಿ ಶೋರೂಂ ಮುಂಭಾಗ ಮೆಲ್ಕಾರ್ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಸ್ ಮುಂಭಾಗದ ಗಾಜು ಹುಡಿಯಾಗಿದ್ದು, ಚಾಲಕ ಪ್ರತಾಪ್ ಗಾಯಗೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ ಬಾಳ್ತಿಲ ಕುದ್ರೆಬೆಟ್ಟಿನಲ್ಲಿ ಸಾಗುತ್ತಿದ್ದ ಬಸ್‌ಗೆ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಕಲ್ಲೆಸೆದಿದ್ದಾರೆ. ಈ ಪ್ರಕರಣದಲ್ಲಿ ಚಾಲಕ ಶೀನಪ್ಪ, ಶಾಲಾ ವಿದ್ಯಾರ್ಥಿಗಳೂ ಆಗಿರುವ ವಾಲಿನ್ ಮರಿಯಾ, ಸಾಕ್ಷಿ ಮತ್ತು ಸುಷ್ಮಾ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಈ ಮೂರು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದ್ದು, ಎಸ್‌ಐ ಚಂದ್ರಶೇಖರ್ ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಶಂಭೂರು ಶೇಡಿಗುರಿ ಸಮೀಪ ಮಂಗಳವಾರ ಬೆಳಗಿನ ಜಾವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆಯಲಾಗಿದೆ. ಇದೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ ಎಂದು ಚಾಲಕ ಕೋಚಪ್ಪ ಹೆಗ್ಡೆ ದೂರು ನೀಡಿದ್ದಾರೆ.

ಸತ್ತಿಕಲ್ಲಿನಲ್ಲಿ 2 ಬಸ್‌ಗಳಿಗೆ ಹಾನಿ: ಪುತ್ತೂರು ನಗರಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಸತ್ತಿಕಲ್ಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಸೋಮವಾರ ರಾತ್ರಿ ಕಲ್ಲೆಸೆದು ಹಾನಿ ಮಾಡಲಾಗಿದೆ.
ಮಂಗಳೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಉಪ್ಪಿನಂಗಡಿಯಿಂದ ಮಾಣಿ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದವರು ಕಲ್ಲೆಸೆದಿದ್ದು, ಗಾಜುಗಳಿಗೆ ಹಾನಿಯಾಗಿ 10 ಸಾವಿರ ರೂ. ನಷ್ಟ ಸಂಭವಿಸಿದೆ. ಬಸ್ ಚಾಲಕ ಉಮೇಶ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕೇರಳ ಬಸ್ ಸಂಚಾರ ಮೊಟಕು
ವಿಟ್ಲ ವ್ಯಾಪ್ತಿಯ ಮೈರದಲ್ಲಿ ಬೆಳಗ್ಗೆ ಬಸ್‌ಗೆ ಕಲ್ಲು ತೂರಾಟ ಪ್ರಕರಣ ನಡೆದ ಬಳಿಕ ಕೇರಳ ಬಸ್‌ಗಳು ಕರ್ನಾಟಕ ಪ್ರವೇಶ ನಿರ್ಬಂಧಿಸಿವೆ. ಗಡಿಭಾಗ ಸಾರಡ್ಕವರೆಗೆ ಆಗಮಿಸಿ ಹಿಂತಿರುಗಿದವು. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಯಿತು.

ಗಲಭೆ ಸೃಷ್ಟಿ ಉದ್ದೇಶ?
ಕೇರಳಕ್ಕೆ ಗೋಸಾಗಣೆ ಮಾಡುತ್ತಿದ್ದ ವಾಹನವನ್ನು ಬೆನ್ನಟ್ಟಿ ಹೋಗಿ ಕೇರಳದಲ್ಲಿ ಅಡ್ಡ ಹಾಕಿದ ವಿಚಾರದಲ್ಲಿ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಸಹಿತ ಆರು ಮಂದಿ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲೇ ವಾಹನವನ್ನು ಅಡ್ಡ ಹಾಕಿದ್ದರೂ, ಕೇರಳದಲ್ಲಿ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ಖಂಡಿಸಿ ವಿಟ್ಲ ಪ್ರಖಂಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸ್ವಯಂಪ್ರೇರಿತ ಬಂದ್ ಮಾಡಬೇಕೆಂಬ ಸಂದೇಶ ಸೋಮವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದನ್ನು ಗಮನಿಸಿಯೇ ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯಗಳು ನಡೆದಿರಬಹುದು ಎನ್ನಲಾಗಿದೆ.

ವಿಟ್ಲ ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ 8 ಬಸ್‌ಗಳ ಮೇಲೆ ಕಲ್ಲು ತೂರಾಟ ಬಗ್ಗೆ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲಿ ಪ್ರಕರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ತಂಡ ರಚನೆ ಮಾಡಲಾಗಿದೆ. ಸಾರ್ವಜನಿಕರು ಈ ವಿಷಯದಲ್ಲಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳ ಸುದ್ದಿ ಕಿವಿ ಕೊಡಬಾರದು.
– ಬಿ.ಎಂ ಲಕ್ಷ್ಮೀಪ್ರಸಾದ್, ಪೊಲೀಸ್ ವರಿಷ್ಠಾಧಿಕಾರಿ, ದ.ಕ

ಬಜರಂಗದಳ ಮುಖಂಡರ ಮೇಲೆ ಕೇಸು
ಪೆರ್ಲ: ಜಾನುವಾರು ಸಾಗಿಸುತ್ತಿದ್ದ ಪಿಕ್‌ಅಪ್ ಗೂಡ್ಸ್ ವಾಹನವನ್ನು ಕಾರಿನಲ್ಲಿ ಬಂದ ತಂಡವೊಂದು ಅಡ್ಡಗಟ್ಟಿ ವಾಹನದಲ್ಲಿದ್ದ ಇಬ್ಬರಿಗೆ ಹಲ್ಲೆಗೈದು, ಹಣ, ವಾಹನ, ಜಾನುವಾರು ಅಪಹರಿಸಿದ ಆರೋಪದಲ್ಲಿ ಆರು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಸೋಮವಾರ ಕೇಸು ದಾಖಲಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಬಂಟ್ವಾಳ ಭಾಗದಲ್ಲಿ ಬಸ್‌ಗಳಿಗೆ ಕಲ್ಲೆಸೆಯಲಾಗಿದೆ ಎಂದು ಶಂಕಿಸಲಾಗಿದೆ.

ಸೋಮವಾರ ಬೆಳಗ್ಗೆ 6.30ಕ್ಕೆ ಪುತ್ತೂರು ಬಳಿ ಪರ್ಪುಂಜ ನಿವಾಸಿಗಳಾದ ಹಂಸ(40) ಮತ್ತು ಅಲ್ತಾಫ್(34) ಎಂಬುವರು ಪಿಕ್‌ಅಪ್ ಗೂಡ್ಸ್ ವಾಹನದಲ್ಲಿ ಎರಡು ದನ ಹಾಗೂ ಒಂದು ಕರುವನ್ನು ಸಾಗಿಸುತ್ತಿದ್ದಾಗ ಅಡ್ಯನಡ್ಕ ಬಳಿಯ ಮಂಜನಡ್ಕದಲ್ಲಿ ತಂಡವೊಂದು ಅಡ್ಡಗಟ್ಟಿದೆ. ಬಳಿಕ ವಾಹನದಲ್ಲಿದ್ದವರಿಗೆ ಹಲ್ಲೆಗೈದು, 50 ಸಾವಿರ ರೂ. ನಗದು, ಪಿಕ್‌ಅಪ್ ವಾಹನ ಹಾಗೂ ಜಾನುವಾರುಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಹಂಸ ಹಾಗೂ ಅಲ್ತಾಫ್ ಕಾಸರಗೋಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನೀಡಿದ ದೂರಿನಂತೆ ಅಡ್ಯನಡ್ಕ ಹಾಗೂ ವಿಟ್ಲ ನಿವಾಸಿಗಳಾದ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಅಕ್ಷಯ್ ರಜಪೂತ್, ಗಣೇಶ್, ರಾಗೇಶ್, ಮಿಥುನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನಿಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಜಾನುವಾರುಗಳ ಸಹಿತ ಪಿಕ್‌ಅಪ್ ವಾಹನ ರಸ್ತೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿದ್ದು, ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಬದಿಯಡ್ಕ ಠಾಣೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅವುಗಳನ್ನು ಬದಿಯಡ್ಕ ಠಾಣೆಗೆ ಹಸ್ತಾಂತರಿಸಲಾಗಿದೆ. ಜಾನುವಾರುಗಳು ವಿಟ್ಲ ಸಮೀಪದ ವ್ಯಕ್ತಿಯೊಬ್ಬರ ಸಂರಕ್ಷಣೆಯಲ್ಲಿದೆ ಎಂಬ ಮಾಹಿತಿ ಇದೆ.
ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಬದಿಯಡ್ಕ ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *