ಸುಳ್ಳು ಕೇಸು ವಾಪಸ್‌ಗೆ ಪಟ್ಟು

ಬದಿಯಡ್ಕ: ಗೋವುಗಳ ಅಕ್ರಮ ಸಾಗಾಟ ತಡೆದ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಬದಿಯಡ್ಕ ಪೊಲೀಸರು ದಾಖಲಿಸಿರುವ ಸುಳ್ಳು ಕೇಸು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು.
ಬುಧವಾರ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ರಿಗೆ ಮನವಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

ಅಕ್ಷಯ್ ರಜಪೂತ್ ಮತ್ತು ಇತರರ ಮೇಲೆ ದರೋಡೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಬದಿಯಡ್ಕ ಪೊಲೀಸರ ಈ ಕ್ರಮವನ್ನು ವಿಶ್ವಹಿಂದು ಪರಿಷತ್ ವಿರೋಧಿಸುತ್ತದೆ. ತಕ್ಷಣ ಪೊಲೀಸರು ಕಾರ್ಯಕರ್ತರ ಮೇಲಿನ ಕೇಸನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು.
ನೇತಾರರಾದ ರವೀಶ್ ತಂತ್ರಿ ಕುಂಟಾರು, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಬಜರಂಗದಳ ಕಾಸರಗೋಡು ಜಿಲ್ಲಾ ಸಂಯೋಜಕ ಸುರೇಶ್ ಶೆಟ್ಟಿ ಪರಂಕಿಲ, ಬದಿಯಡ್ಕ ಬಜರಂಗದಳ ಸಂಯೋಜಕ ಸುನೀಲ್ ಶೆಟ್ಟಿ, ಭಾಸ್ಕರ ಬದಿಯಡ್ಕ, ಹರೀಶ್ ಸ್ಕಂದ, ಚಿತ್ತರಂಜನ್, ಪ್ರಸಾದ ಕನಕಪ್ಪಾಡಿ, ಶರತ್ ಶೆಟ್ಟಿ ವಳಮಲೆ, ರೂಪೇಶ ಶೆಟ್ಟಿ, ಅನಿಲ್ ಕುಟ್ಟ ಹಾಗೂ ಕಾರ್ಯಕರ್ತರು ಜತೆಗಿದ್ದರು.

ಶಾಂತಿ ಕದಡುವವರ ಗಡಿಪಾರು
ಪುತ್ತೂರು: ಗೋವುಗಳ ಅಕ್ರಮ ಸಾಗಾಟ ದಂಧೆ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವವರನ್ನು ಗಡಿಪಾರು ಮಾಡಬೇಕು. ಇದರ ಬದಲಾಗಿ ಗೋ ರಕ್ಷಣೆ ನಿರತ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಬಂಧಿಸಲು ಮುಂದಾದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಬುಧವಾರ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಪುತ್ತೂರಿನಿಂದ ಕೇರಳಕ್ಕೆ ದನ ಸಾಗಾಟ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿ ಗೋವುಗಳ ರಕ್ಷಣೆಗೆ ಮುಂದಾದ ಅಕ್ಷಯ್ ರಜಪೂತ್ ಮತ್ತು ಮೂವರ ವಿರುದ್ಧ ಬದಿಯಡ್ಕ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಳು ಪ್ರಕರಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಸತೀಶ್, ಜಿಲ್ಲಾ ಸಮಿತಿ ಕಾನೂನು ಸಲಹೆಗಾರ ಮಾಧವ ಪೂಜಾರಿ, ಬಜರಂಗ ದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ತಾಲೂಕು ಸಂಯೋಜಕ ಹರೀಶ್‌ಕುಮಾರ್ ಇದ್ದರು.

ಗೋ ಕಳ್ಳತನ ವಿರುದ್ಧ ಕ್ರಮಕ್ಕೆ ಒತ್ತಾಯ
ಮಂಗಳೂರು: ಗೋವುಗಳ ಕಳ್ಳತನ ಹಾಗೂ ಅಕ್ರಮ ಸಾಗಾಟ ಮೂಲಕ ಮತಾಂಧ ಶಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಸಿವೆ. ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಾರಕಾಯುಧ ಬಳಸಿ ಹಟ್ಟಿಯಿಂದ ಗೋವುಗಳನ್ನು ಕಳವು ಮಾಡುವ ಪ್ರಕರಣ ಪ್ರತಿನಿತ್ಯ ನಡೆಯುತ್ತಿವೆ. ಇದರಿಂದ ಹೈನುಗಾರರು, ರೈತರು ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಹಟ್ಟಿಯಿಂದ, ಗೋ ಶಾಲೆಗಳಿಂದ ಗೋವುಗಳನ್ನು ಕದಿಯುತ್ತಿದ್ದರೂ ಸರ್ಕಾರ ಮೌನ ವಹಿಸಿದೆ. ಗೋವುಗಳನ್ನು ಕದ್ದು ಹತ್ಯೆ ಮಾಡುತ್ತಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋ ರಕ್ಷಣೆಗೆ ನೇರ ಕಾರ್ಯಾಚರಣೆ
ಪುತ್ತೂರು: ವಿಟ್ಲ, ಉಪ್ಪಿನಂಗಡಿ, ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಗೋ ಸಾಗಾಟ ಪ್ರಕರಣಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಬೇಕಾದ ಮತ್ತು ಕಾನೂನಿನ ಮೂಲಕ ಹದ್ದುಬಸ್ತಿನಲ್ಲಿ ಇಡಬೇಕಾದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಗೋಮಾತೆ ರಕ್ಷಣೆಗೆ ಶಾಸಕನಾಗಿ ನಾನು ನೇರ ಕಾರ್ಯಾಚರಣೆಗೆ ಇಳಿಯಬೇಕಾದಿತು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಸಹಿಸಲು ಸಾಧ್ಯವಿಲ್ಲ. ಗೋಮಾತೆ ರಕ್ಷಣೆಗೆ ನಾನು ಬದ್ಧ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.

Leave a Reply

Your email address will not be published. Required fields are marked *