More

    ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ; ಬಿಬಿಎಂಪಿ ವ್ಯಾಪ್ತಿಯ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಸಂಪುಟ ಸಭೆ ತೀರ್ಮಾನ

    ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ಎರಡು ಪಟ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

    ಈ ಕಾಯ್ದೆ ಈಗಾಗಲೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದು, ಈಗ ಅದನ್ನು ಬಿಬಿಎಂಪಿ ವ್ಯಾಪ್ತಿಗೂ ವಿಸ್ತರಿಸಲು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ.

    ಅಕ್ರಮ ಕಟ್ಟಡ ತೆರವುಗೊಳಿಸುವವರೆಗೆ ಎರಡು ಪಟ್ಟು ತೆರಿಗೆ ವಿಧಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಕ್ರಮ-ಸಕ್ರಮದ ವಿಚಾರವನ್ನು ನಾವು ಇನ್ನೂ ಮಾಡಿಲ್ಲ. ಆದರೆ, ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ಮಾತ್ರ ಎರಡು ಪಟ್ಟು ತೆರಿಗೆ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಶನಿವಾರ ಸರ್ಕಾರಿ ಆದೇಶ ಹೊರ ಬೀಳಲಿದೆ ಎಂದರು. ಸರ್ಕಾರ ಸಂಪನ್ಮೂಲ ಸಂಗ್ರಹಕ್ಕೆ ಈ ದಾರಿ ಹುಡುಕಿದೆಯಾ ಎಂಬ ಪ್ರಶ್ನೆಗೆ, ಆ ಹಣದಿಂದಲೇ ಸರ್ಕಾರ ನಡೆಯಬೇಕಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

    ಪುರಸಭೆ ಮೇಲ್ದರ್ಜೆಗೆ: ಮಾದನಾಯಕನಹಳ್ಳಿ ಹಾಗೂ ಸಿದ್ದನಹೊಸಳ್ಳಿ ಗ್ರಾಪಂಗಳನ್ನು ಸೇರಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಂಪುಟ ತೀರ್ವನಿಸಿದೆ. ಬೆಂಗಳೂರು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಆವರಣದಲ್ಲಿ 132.31 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಿುಸಲಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದ ಎಂಎಸ್​ಎಂಇ ಹಾಗೂ ಬೃಹತ್ ಕೈಗಾರಿಕೆ ನಿರ್ದೇಶನಾಲಯಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜಿಲ್ಲಾ ಮಟ್ಟದ ಯೋಜನಾ ಸಮಿತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts