ಅಕ್ರಮ ಮದ್ಯ ತಡೆಗೆ ಸೂಚನೆ

ಜಮಖಂಡಿ: ಪಾನ್​ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು. ವಸತಿ ನಿಲಯ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾ ಡಿದ ಅವರು, ಬಾಕಿ ಉಳಿದಿರುವ ಕಾಮ ಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬೇಸಿಗೆಯಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಗ್ರಾಮೀಣ ನೀರು ಸರಬರಾಜು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಂಬಗಿ ಗ್ರಾಮದ ಶಾಲೆ ಕಟ್ಟಡ ಶಿಥಿಲಗೊಂಡಿದೆ. ಮುಳುಗಡೆ ಪ್ರದೇಶ ಎಂದು ಕಟ್ಟಡ ದುರಸ್ತಿಗೊಳಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಶಿಥಿಲ ಗೊಂಡಿರುವ ಶಾಲೆಗಳ ಕುರಿತು ವರದಿ ನೀಡುವಂತೆ ಬಿಇಒ ಎಂ.ಬಿ. ಮೋರಟಗಿ ಅವರಿಗೆ ಆದೇಶಿಸಿದರು.

ರೇಷ್ಮೆ ಬೇಸಾಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಬೆಳೆ ಕ್ಷೇತ್ರದ ಪ್ರಮಾಣ ಹೆಚ್ಚಾಗುವಂತೆ ಯೋಜನೆ ರೂಪಿಸುವಂತೆ ರೇಷ್ಮೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಜಮಖಂಡಿ ಕ್ಷೇತ್ರದಲ್ಲಿ ಎಷ್ಟು ಕಿ.ಮೀ.ವರೆಗೆ ರಸ್ತೆ ಅಭಿವೃದ್ಧಿಪಡಿಸಬೇಕಿದೆ ಎಂಬುದರ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಹಿರೇಮಠ ಅವರಿಂದ ಮಾಹಿತಿ ಪಡೆದ ಶಾಸಕರು, ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಬಣ್ಣದ ಹಾಗೂ ತಾಲೂಕು ಆರೋಗ್ಯಾಧಿಕಾರಿ ಸಭೆಗೆ ಗೈರಾಗಿದ್ದಕ್ಕೆ ಗರಂ ಆದರು. ಅವರ ಸಹಾಯಕರಿಂದ ಮಾಹಿತಿ ಪಡೆಯುವುದು ಬೇಡ. ಅಧಿಕಾರಿಗಳು ಬಂದರಷ್ಟೆ ಮಾಹಿತಿ ಪಡೆಯುತ್ತೇನೆ ಎಂದರು.

ಎಸಿ ಮೊಹಮ್ಮದ್ ಇಕ್ರಮ್ ಶರೀಫ್, ತಹಸೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಇಒ ಎನ್.ವೈ. ಬಸರಿಗಿಡದ, ಅಬಕಾರಿ ಇಲಾಖೆಯ ಸಂಗಮೇಶ ಮುರನಾಳ ಇದ್ದರು.

ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ತರಾಟೆ: ವಾರ್ಡನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಗೀತಾ ಹೇಳುತ್ತಿದ್ದಂತೆ, ನೀವು ಅವರಿಗೆ ನೋಟಿಸ್ ನೀಡದೆ ಕಣ್ಣುಮುಚ್ಚಿ ಕುಳಿತಿದ್ದೀರಿ. ಅದಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಾನು ಹಾಸ್ಟೆಲ್​ಗೆ ಭೇಟಿ ನೀಡುತ್ತೇನೆ. ಅವ್ಯವಸ್ಥೆ ಕಂಡರೆ ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.