ಮಾರಗಾನುಕುಂಟೆ ಡೇರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಹುದ್ದೆ ಪಡೆದ ಸೈಬರ್ ಸೆಂಟರ್ ಮಾಲೀಕ?
ಬಾಗೇಪಲ್ಲಿ: ಪದವಿ ನಕಲಿ ಅಂಕಪಟ್ಟಿ ಹಾಗೂ ದಾಖಲೆ ಸಲ್ಲಿಸಿ ಡೇರಿಯೊಂದರಲ್ಲಿ ಕಾರ್ಯದರ್ಶಿ ಹುದ್ದೆ ಗಿಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ, ನೇಮಕಾತಿ ಪ್ರಕ್ರಿಯೆಯ ವಿವರಣೆ ಕೇಳಿ ಡೇರಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಜಿಲ್ಲಾ ಸಹಕಾರ ಸಂಘಗಳ ಸಹಾಯಕರ ನಿಬಂಧಕರ ಕಚೇರಿಯು ಸೆ.3ರಂದೇ ನೋಟಿಸ್ ಜಾರಿಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಮಾರಗಾನುಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶಿವರಾಮಪ್ಪ ನಿವೃತ್ತರಾದ ಬಳಿಕ ಖಾಲಿಯಿದ್ದ ಕಾರ್ಯದರ್ಶಿ ಹುದ್ದೆಗೆ 2024ರ ಜುಲೈ1 ರಂದು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 7 ಜನ ಅರ್ಜಿ ಸಲ್ಲಿಸಿದ್ದರು. ಆದರೆ ಪದವೀಧರ ವಿದ್ಯಾರ್ಹತೆ ಹೊಂದಿರುವವರ ಬದಲಿಗೆ ನಕಲಿ ದಾಖಲೆ ಸಲ್ಲಿಸಿರುವ ಶ್ರೀನಾಥರೆಡ್ಡಿ ಎಂಬುವವರನ್ನು ನೇಮಕಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರು, ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಜುಲೈ 30ರಂದು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಡೇರಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ನೇಮಕಾತಿ ಪ್ರಕ್ರಿಯೆ ವಿವರಣೆ ಕೇಳಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ನೋಟಿಸ್ ಜಾರಿಮಾಡಿದೆ.
ಸಮಗ್ರ ತನಿಖೆಯಾಗಲಿ
ಕಾರ್ಯದರ್ಶಿಯಾಗಿದ್ದ ನನ್ನ ತಂದೆ ಶಿವರಾಮಪ್ಪ ನಿವೃತ್ತರಾದ ಬಳಿಕ ಆ ಹುದ್ದೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಸಂಘದ ಆಡಳಿತ ಮಂಡಳಿ ನಕಲಿ ದಾಖಲೆ ಸಲ್ಲಿಸಿರುವ ಶ್ರೀನಾಥರೆಡ್ಡಿಯೊಂದಿಗೆ ಶಾಮೀಲಾಗಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಡ್ಡದಾರಿಯಲ್ಲಿ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಮಾಡಿಕೊಂಡಿದೆೆ. ಪ್ರಕರಣದ ಸಮಗ್ರ ತನಿಖೆಯಾಗಲಿ ಎಂದು ದೂರುದಾರ ಬಿ.ಎಸ್.ಅನಿಲ್.ಕುಮಾರ್ ಒತ್ತಾಯಿಸಿದ್ದಾರೆ.
ಅರ್ಹತೆ ಪಾಲನೆ ಕಡ್ಡಾಯ
ಸಹಕಾರಿ ಸಂಘಗಳಲ್ಲಿ ಕಾರ್ಯದರ್ಶಿ ಹುದ್ದೆಗೆ ಕೆಲ ಕನಿಷ್ಠ ಅರ್ಹತೆ ಕಡ್ಡಾಯವಾಗಿದ್ದು, ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಸಹಕಾರ ವಿಷಯದಲ್ಲಿ ಪದವೀಧರನಾಗಿರಬೇಕು, ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಕೋರ್ಸ್‌ನಲ್ಲಿ ಕನ್ನಡ ಭಾಷಾ ವಿಷಯ ವ್ಯಾಸಂಗ ಮಾಡಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬೇಸಿಕ್ ಕಂಪ್ಯೂಟರ್ ತರಬೇತಿ ಸಹ ಪಡೆದಿರಬೇಕು. ಆದರೆ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಿರುವ ಶ್ರೀನಾಥರೆಡ್ಡಿ ಈ ಯಾವ ಅರ್ಹತೆಗಳನ್ನೂ ಹೊಂದಿಲ್ಲ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ.
ಸೈಬರ್ ಸೆಂಟರ್‌ನಲ್ಲಿ ಅಂಕಪಟ್ಟಿ ತಯಾರು?
ಡೇರಿ ಕಾರ್ಯದರ್ಶಿ ಹುದ್ದೆ ಗಿಟ್ಟಿಸಿಕೊಂಡಿರುವ ಶ್ರೀನಾಥರೆಡ್ಡಿ ಸ್ವಂತ ಸೈಬರ್ ಸೆಂಟರ್ ಹೊಂದಿದ್ದು, ಮೇಘಾಲಯ ರಾಜ್ಯದ ವಿಲ್ಲಿಯಂ ಕ್ಯಾರಿ ಯೂನಿವರ್ಸಿಟಿಗೆ ಹೊಲುವ ಅಂಕಪಟ್ಟಿಯನ್ನು ಸೈಬರ್ ಸೆಂಟರ್‌ನಲ್ಲಿ ಸಿದ್ಧಪಡಿಸಿ ಅರ್ಜಿಯೊಂದಿಗೆ ಲಗತ್ತಿಸಿರುವ ಆರೋಪವಿದೆ. ಸದರಿ ಅಂಕಪಟ್ಟಿ ನಕಲಿಯೋ ಅಥವಾ ಅಸಲಿಯೋ ಎಂದು ಖಾತ್ರಿ ಪಡಿಸಿಕೊಳ್ಳಲು ಮೇಘಾಲಯ ಯೂನಿವರ್ಸಿಟಿಗೆ ಇ-ಮೇಲ್ ಮೂಲಕ ದೂರುದಾರರು ಮನವಿ ಸಲ್ಲಿಸಿದ್ದು, ಅಂಕಪಟ್ಟಿ ನಕಲಿ ಎಂದು ಯೂನಿವರ್ಸಿಟಿ ಸ್ಪಷ್ಟನೆ ನೀಡಿದೆ. ಈ ಸ್ಪಷ್ಟನೆ ಸಮೇತ ಜು.30ರಂದೇ ಚಿಕ್ಕಬಳ್ಳಾಪುರ ಜಿಲ್ಲೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಲಾಗಿದೆ. ತಿಂಗಳು ಕಳೆದರೂ ನೇಮಕಾತಿಯ ಅಕ್ರಮ ಸಂಬಂಧ ನೋಟಿಸ್ ಜಾರಿಗೊಳಿಸಿರುವುದನ್ನು ಹೊರತು ಪಡಿಸಿ ಯಾವುದೇ ಕ್ರಮವಹಿಸಿಲ್ಲ. ಇದರಿಂದ ನೈಜ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರುದಾರ ವಿ.ಅಶೋಕ ಬೇಸರ ವ್ಯಕ್ತಪಡಿಸಿದ್ದಾರೆ.