ವಳಚ್ಚಿಲ್ ವ್ಯೆಪಾಯಿಂಟ್‌ನಲ್ಲಿ ಅಕ್ರಮ ಚಟುವಟಿಕೆ

<<ಪ್ರಾಕೃತಿಕ ಸೌಂದರ್ಯ ಆಸ್ವಾದನೆ ಹೆಸರಲ್ಲಿ ಪರಿಸರ ಹಾಳು * ವಿದ್ಯಾರ್ಥಿಗಳು, ಪ್ರಸಾಸಿಗರಿಂದಲೇ ಕೃತ್ಯ>>

ಭರತ್ ಶೆಟ್ಟಿಗಾರ್ ಮಂಗಳೂರು
ಒಂದೆಡೆ ವಿಶಾಲವಾಗಿ ಹರಿಯುವ ನೇತ್ರಾವತಿ ನದಿ, ಅಲ್ಲಿಂದ ಆಚೆಗೆ ಎತ್ತರದ ಗುಡ್ಡ, ಇನ್ನೊಂದೆಡೆ ತಿರುವು ಮುರುವಾದ ರಾಷ್ಟ್ರೀಯ ಹೆದ್ದಾರಿ, ಅದರಲ್ಲಿ ಸಣ್ಣದಾಗಿ ಕಾಣುವ ಚಲಿಸುವ ವಾಹನಗಳು, ಇದರ ನಡುವೆ ದೂರದಲ್ಲಿ ಸಾಯಂಕಾಲದ ಸೂರ್ಯಾಸ್ತ. ನೋಡಿದಷ್ಟೂ ಕಣ್ಣಿಗೆ ತಂಪು ನೀಡುವ ಪ್ರಕೃತಿ ಸೌಂದರ್ಯ….
ಇದು ಪಶ್ಚಿಮ ಘಟ್ಟದ ಯಾವುದೋ ಪ್ರದೇಶದ ವರ್ಣನೆಯಲ್ಲ. ಮಂಗಳೂರು ನಗರಕ್ಕೆ ಹೊಂದಿಕೊಂಡಂತಿರುವ ಹೊರವಲಯದ ಅಡ್ಯಾರ್ ಬಳಿಯ ವಳಚ್ಚಿಲ್ ವ್ಯೆಪಾಯಿಂಟ್ (ವಳಚ್ಚಿಲ್ ಗುಡ್ಡ)ದಿಂದ ನೋಡಿದಾಗ ಕಾಣುವ ಪ್ರಾಕೃತಿಕ ಸೌಂದರ್ಯದ ವಿವರಣೆ…

ಅಕ್ರಮ ಚಟುವಟಿಕೆಗಳ ತಾಣ: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ವಳಚ್ಚಿಲ್ ವ್ಯೆಪಾಯಿಂಟ್ ಯಾವಾಗ ಪ್ರವಾಸಿಗರಿಗೆ ತೆರೆದುಕೊಂಡಿತೋ, ಅಲ್ಲಿಂದ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿತು. ರಾತ್ರಿ ವೇಳೆ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೂ ಪೊಲೀಸರು ಬೀಟ್ ಮಾಡಿದರೂ ಅವರ ಕಣ್ಣು ತಪ್ಪಿಸಿ ಕುಡಿದು, ಮೋಜು ಮಾಡಲು ಬರುವವರಿದ್ದಾರೆ. ಇದಕ್ಕೆ ಪುರಾವೆಯಾಗಿ ಸ್ಥಳದಲ್ಲಿ ಮದ್ಯದ ಬಾಟಲಿ, ಟಿನ್‌ಗಳು, ಸಾಫ್ಟ್‌ಡ್ರಿಂಕ್ ಬಾಟಲಿಗಳು, ಸಿಗರೇಟು ಪ್ಯಾಕೇಟ್‌ಗಳು ಕಾಣುತ್ತವೆ. ಸ್ಥಳದಲ್ಲಿ ಕಸಕಡ್ಡಿ ತ್ಯಾಜ್ಯದ ರಾಶಿಯೇ ಬಿದ್ದಿದೆ. ಆಹಾರ ಪೊಟ್ಟಣಗಳನ್ನು ಸ್ಥಳದಲ್ಲಿಯೇ ಎಸೆದು ಹೋಗಿದ್ದಾರೆ. ಸ್ಥಳೀಯರಿಗಿಂತ ಹೆಚ್ಚಾಗಿ, ಹೊರಗಿನಿಂದ ಬರುವವರೇ ಈ ರೀತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಬೀಟ್ ವ್ಯವಸ್ಥೆಗೂ ಡೋಂಟ್ ಕೇರ್:  ವಳಚ್ಚಿಲ್ ವ್ಯೆಪಾಯಿಂಟ್‌ಗೆ ವಾರಾಂತ್ಯಕ್ಕೆ, ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ವಾರದ ನಡುವಿನಲ್ಲಿ ಬರುವವರ ಸಂಖ್ಯೆ ಕಡಿಮೆ. ಪ್ರತಿ ದಿನ ಸಾಯಂಕಾಲ ಕತ್ತಲಾಗುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳದಿಂದ ಜನರನ್ನು ಖಾಲಿ ಮಾಡಿಸುತ್ತಿದ್ದಾರೆ. ಆದರೂ ಕೆಲವರು ಅಕ್ರಮವಾಗಿ ಪ್ರವೇಶಿಸಿ, ಕುಡಿತ, ಮಾದಕ ವಸ್ತುಗಳ ಸೇವನೆಯಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಪೊಲೀಸರು.

ಗುಡ್ಡದ ತುದಿ-ಪಕ್ಕದಲ್ಲೇ ಫಾಲ್ಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ವಳಚ್ಚಿಲ್ ಬಳಿ ಎಡಕ್ಕಿರುವ ರಸ್ತೆಯಲ್ಲಿ ರೈಲ್ವೆ ಟ್ರಾೃಕ್ ದಾಟಿ ಮುಂದಕ್ಕೆ ಸಾಗಬೇಕು. ರಸ್ತೆ ಅಪಾಯಕಾರಿ ತಿರುವುಗಳಿಂದ ಕೂಡಿದ್ದು, ಕೊನೇ ತಿರುವಿನಲ್ಲಿ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ಮುಂದಕ್ಕೆ ಹೋದಾಗ ಸಿಗುವುದೇ ವ್ಯೆಪಾಯಿಂಟ್. ಗುಡ್ಡದ ಮೇಲಿಂದ ಸುತ್ತಲಿನ ಪ್ರಾಕೃತಿಕ ಸೌಂದರ್ಯ ಸವಿಯಬಹುದಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಸಿದ್ಧ ಅಡ್ಯಾರ್ ಕಾನ ಫಾಲ್ಸ್ ಪಕ್ಕದಲ್ಲೇ ಇದೆ.

 

ವಳಚ್ಚಿಲ್ ವ್ಯೆಪಾಯಿಂಟ್ ಪ್ರಕೃತಿ, ಸೂರ್ಯಾಸ್ತ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಪ್ರಸ್ತುತ ಸ್ಥಳಕ್ಕೆ ಬಂದು ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೂ ಇದೊಂದು ಮೋಜಿನ ತಾಣವಾಗಿದೆ.
ಜೀತು ಅಡ್ಯಾರ್, ಸ್ಥಳೀಯ ನಿವಾಸಿ